ಬೆಂಗಳೂರು: ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ರಾಜ್ಯ ಬಿಜೆಪಿ ಬುಧವಾರ ತೀವ್ರ ಹೋರಾಟ ನಡೆಸಿತು. ಸರ್ಕಾರದ ನಡೆಯನ್ನು ಖಂಡಿಸಿ ರಾಜ್ಯಪಾಲರಿಗೂ ದೂರನ್ನು ಸಹ ನೀಡಿತು.
ಈ ಘಟನೆಗೆ ಸಂಬಂಧಿಸಿದಂತೆ ನಗರದ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದರು. ಇದೀಗ ಈ ಕುರಿತು ಟ್ವೀಟ್ ಮುಖೇನ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ಪ್ರತಿಭಟನೆಗೆ ತಿರುಗೇಟು ನೀಡಿದ್ದಾರೆ.
"ಹಳೆಯ ಪ್ರಕರಣವೊಂದರಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿರುವ ಶ್ರೀಕಾಂತ್ ಪೂಜಾರಿ ಶ್ರೀರಾಮನಂತೆ ಆದರ್ಶ ಪುರುಷನೂ ಅಲ್ಲ, ಶ್ರೀಕೃಷ್ಣನಂತೆ ಅವತಾರ ಪುರುಷನೂ ಅಲ್ಲ. ಆತ ವೃತ್ತಿಪರ ಕ್ರಿಮಿನಲ್ ಅಷ್ಟೆ. ಪೂಜಾರಿ ವಿರುದ್ಧ 1992ರಿಂದ 2014 ರವರೆಗೆ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ಸುಮಾರು 16 ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಇಂತಹ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿ ರಾಮಭಕ್ತ ಎಂಬ ಸೋಗು ಹಾಕಿಕೊಂಡರೆ ಕಾನೂನು ಕ್ರಮ ತೆಗೆದುಕೊಳ್ಳಬಾರದೆ.?" ಎಂದಿದ್ದಾರೆ.
"ರಾಜಕೀಯ ಕಾರಣಗಳಿಗಾಗಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಬೆಂಬಲಕ್ಕೆ ನಿಂತಿರುವ ರಾಜ್ಯ ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಮತ್ತು ಸಂಸ್ಕಾರವೇ ಇಲ್ಲದಂತಾಗಿದೆ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣಾ ಪ್ರಮಾಣಪತ್ರವನ್ನು ನ್ಯಾಯಾಲಯ ಕೇಳಿದೆ. ಅದರಂತೆ ಪೊಲೀಸರು ಇತ್ಯರ್ಥವಾಗದ ಹಳೆಯ ಪ್ರಕರಣ ಸಂಬಂಧ ಶ್ರೀಕಾಂತ್ ಪೂಜಾರಿ ಹೆಸರಿದ್ದುದರಿಂದ ಬಂಧಿಸಿದ್ದಾರೆ" ಎಂದರು.
"ನ್ಯಾಯಾಲಯದ ಸೂಚನೆಯ ಅನುಸಾರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಈ ವಿಚಾರ ತಿಳಿದಿದ್ದರೂ ಬಿಜೆಪಿ ನಾಯಕರು ಕ್ರಿಮಿನಲ್ ಪರ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ" ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.