ನ್ಯೂಸ್

'ಸಿದ್ದರಾಮಯ್ಯ ಮುಂದೆ ಅನಂತ್ ಕುಮಾರ್ ಹೆಗಡೆ ಹುಲ್ಲು ಕಡ್ಡಿಗೂ ಸಮಾನರಲ್ಲ': ದಿನೇಶ್​ ಗುಂಡೂರಾವ್ ವಾಗ್ದಾಳಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್​ ಏಕವಚನದಲ್ಲಿ ಮಾತನಾಡಿದ ವಿಚಾರಕ್ಕೆ ಇದೀಗ ಕಾಂಗ್ರೆಸ್​ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದು, ವಯಸ್ಸಿನಲ್ಲಿ ಹಾಗೂ ಅನುಭವದಲ್ಲಿ ಸಿಎಂ ಅವರ ಮುಂದೆ ಅನಂತ್ ಕುಮಾರ್ ಹೆಗಡೆ ಹುಲ್ಲು ಕಡ್ಡಿಗೂ ಸಮಾನರಲ್ಲ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

"ಸಿದ್ದರಾಮಯ್ಯ ಅವರನ್ನು ಸಂಸದ ಅನಂತ್ ಕುಮಾರ್ ಹೆಗಡೆ 'ಮಗನೇ' ಎಂದು ಸಾರ್ವಜನಿಕವಾಗಿ ಹೀಗೆಳೆದಿದ್ದಾರೆ. 'ಕುಲವಂ ನಾಲಗೆ ನುಡಿಯಿತು' ಎಂಬಂತೆ ಉ.ಕನ್ನಡ ಸಂಸದರ ಸಂಸ್ಕಾರ ಅವರ ಮಾತುಗಳಲ್ಲೇ ತಿಳಿಯುತ್ತದೆ. ವಯಸ್ಸಿನಲ್ಲಿ ಹಾಗೂ ಅನುಭವದಲ್ಲಿ ಸಿದ್ದರಾಮಯ್ಯರ ಮುಂದೆ ಅನಂತ್ ಕುಮಾರ್ ಹೆಗಡೆ ಹುಲ್ಲು ಕಡ್ಡಿಗೂ ಸಮಾನರಲ್ಲ. ಶೋಷಿತ ಸಮುದಾಯದ ದ್ವನಿಯಾಗಿರುವ ಸಿದ್ದರಾಮಯ್ಯರನ್ನು ಮತಾಂಧತೆಯ ವಿಷ ತುಂಬಿಕೊಂಡಿರುವ ಹೆಗಡೆ ಏಕವಚನದಲ್ಲಿ 'ಮಗನೇ' ಎಂದಿರುವುದು ಅವರ ಕೊಳಕು ಮನಸ್ಥಿತಿಯ ಅನಾವರಣಗೊಳಿಸಿದೆ" ಎಂದರು.

"ಸಿದ್ದರಾಮಯ್ಯರಿಗೆ 'ಮಗನೇ' ಎಂದು ಸಂಬೋಧಿಸಿರುವ ಅನಂತ್ ಕುಮಾರ್ ಹೆಗಡೆ ಹಿಂದೂ ಸಮಾಜದ ಕಳಂಕವಿದ್ದಂತೆ. ವಯಸ್ಸಿನಲ್ಲಿ ಹಿರಿಯರಾದವರಿಗೆ ಮರ್ಯಾದೆ ಕೊಡುವುದು ನಮ್ಮ ಹಿಂದೂ ಧರ್ಮ ಕಲಿಸಿರುವ ಸಂಸ್ಕಾರ. ಅನಂತ್ ಕುಮಾರ್ ಯಾವ ಧರ್ಮದಿಂದ ಈ ರೀತಿ ಕೊಳಕು ಭಾಷೆ ಮಾತನಾಡುವ ಸಂಸ್ಕಾರ ಕಲಿತಿದ್ದಾರೆ? ಬಾಯಿ ಬಿಟ್ಟರೆ ಹೊಡಿ, ಬಡಿ, ಕೊಚ್ಚು, ಕೊಲ್ಲು, ದ್ವೇಷ, ಸೇಡು ಎನ್ನುವ ಹೆಗಡೆಯಂತಹವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಟ್ಟ ಹುಳುವಿದ್ದಂತೆ" ಎಂದಿದ್ದಾರೆ ಸಚಿವರು.