ನ್ಯೂಸ್

VIDEO: ಊಟದಲ್ಲಿ ಕೂದಲು.., ಆದರೆ ಬಂದಿದ್ದೆಲ್ಲಿಂದ? ಸಿಸಿ ಕ್ಯಾಮರಾ ದೃಶ್ಯದಲ್ಲಿ ಬಯಲಾಯ್ತು ಸತ್ಯ...!

ಲಂಡನ್​: ಊಟದ ಬಿಲ್​ ಕೊಡದೆ ಇರೋಕೆ ತಟ್ಟೆಯಲ್ಲಿ ಜಿರಳೆ ಹಾಕಿ ಹೋಟೆಲ್​ನಲ್ಲಿ ಜಗಳವಾಡಿದ್ದನ್ನು ಅನೇಕ ಸಿನಿಮಾಗಳಲ್ಲಿ ನೋಡಿರುತ್ತೇವೆ. ಇಲ್ಲೂ ಅಂಥದ್ದೇ ಸನ್ನಿವೇಶ ಸೃಷ್ಟಿಯಾಗಿತ್ತು. ಆದರೆ, ಉಪಯೋಗಿಸಿದ ವಸ್ತು ಮಾತ್ರ ಬೇರೆ ಹಾಗೂ ಊಹಿಸಲಾಗದಷ್ಟು ವಿಚಿತ್ರ.

ಬ್ರಿಟನ್​ನ ಬ್ಲ್ಯಾಕ್​ಬರ್ನ್​ ಪ್ರದೇಶದಲ್ಲಿರುವ ಬಾಬೆರ್ಕ್ಯೂ ಕಿಚನ್​ ರೆಸ್ಟೋರಂಟ್​ಗೆ ತೆರಳಿದ್ದ ಇಬ್ಬರು ಯುವಕರು ಅಂದಾಜು 67 ಪೌಂಡ್​ (6,400 ರೂ.) ಮೊತ್ತದ ಊಟಕ್ಕೆ ಆರ್ಡರ್​ ಮಾಡಿದ್ದರು. ಆದರೆ, ಕೊನೆಗೆ ಊಟದಲ್ಲಿ ಕೂದಲಿದೆ ಎಂದು ಆರೋಪಿಸಿ ಬಿಲ್​ ಪಾವತಿಸಲು ನಿರಾಕರಿಸಿದ್ದಾರೆ.

ಮ್ಯಾನೇಜರ್​ ಹೇಳುವ ಪ್ರಕಾರ, ಇಬ್ಬರು ಯುವಕರು 55 ಪೌಂಡ್​ ಮೌಲ್ಯದ ಭೂರಿ ಭೋಜನಕ್ಕೆ ಆರ್ಡರ್​ ಮಾಡಿದ್ದರು. ಅದರಲ್ಲಿ ಅಂದಾಜು 6 ಜನಕ್ಕೆ ಆಗುವಷ್ಟು ಆಹಾರವನ್ನು ನೀಡಲಾಗುತ್ತದೆ. ಇಬ್ಬರೇ ಇರುವುದರಿಂದ ಅಷ್ಟೊಂದು ಬೇಕಾಗಲ್ಲ ಎಂದು ಆ ಯುವಕರಿಗೆ ತಿಳಿ ಹೇಳಲಾಗಿತ್ತು. ಹೀಗಿದ್ದರೂ ಅದನ್ನೇ ಬೇಕೆಂದು ಕೇಳಿದ್ದರು. ಜತೆಗೆ ಕೆಲ ಪೇಯ ಹಾಗೂ ಇತರ ಖಾದ್ಯಗಳನ್ನು ತರಿಸಿಕೊಂಡಿದ್ದರು.

ಕೊನೆಗೆ, ಆ ಯುವಕರು ಊಟದ ಕೊನೆಯಲ್ಲಿ ಸಪ್ಲೈಯರ್​ನನ್ನು ಕೂಗಿ, "ಈ ಊಟದಲ್ಲಿ ಕೂದಲಿದೆ'' ಎಂದು ತಗಾದೆ ತೆಗೆದಿದ್ದರು. ಅಲ್ಲದೆ, ಬಿಲ್​ ಪಾವತಿಸುವುದಿಲ್ಲ ಎಂದು ಕಿರಿಕ್ ಶುರುಮಾಡಿದ್ದರು. ಹೋಟೆಲ್ ಸಿಬ್ಬಂದಿ ಅವರ ಆರೋಪದ ಸತ್ಯಾಸತ್ಯ ಪರಿಶೀಲನೆಗಾಗಿ ಊಟದ ತಟ್ಟೆಯನ್ನು ಪರೀಕ್ಷಿಸಿದಾಗ ಬಿರಿಯಾನಿ, ಕಬಾಬ್​ ಹಾಗೂ ನಾನ್​ನಲ್ಲಿ ಕೂದಲು ಕಂಡುಬಂದಿತ್ತು. ಅವರ ವರ್ತನೆ ಸಹಜವಾಗಿಲ್ಲದ ಕಾರಣ ಹೋಟೆಲ್ ಸಿಬ್ಬಂದಿ ಅನುಮಾನದಿಂದ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಅವರು ಮಾಡುತ್ತಿರುವುದನ್ನು ಕಂಡು ದಂಗಾಗಿ ಹೋಗಿದ್ದಾರೆ!.

ಸಿಸಿ ಕ್ಯಾಮರಾ ದೃಶ್ಯಾವಳಿ ಪ್ರಕಾರ, ಊಟದ ನಡುವೆ ಒಬ್ಬ ಯುವಕ ತನ್ನ ಚಡ್ಡಿಯೊಳಗೆ ಕೈ ಹಾಕುತ್ತಾನೆ. ಬಳಿಕ ಏನನ್ನೋ ತಟ್ಟೆಯ ಮೇಲೆ ಉದುರಿಸುತ್ತಿರುವುದು ಕಾಣಿಸುತ್ತದೆ. ಅದನ್ನೇ ಯುವಕರಿಗೂ ತೋರಿಸಿ, ಅದು ಗುಪ್ತಾಂಗದ ಕೂದಲು ಎಂದು ಹೋಟೆಲ್ ಸಿಬ್ಬಂದಿ ಅವರನ್ನು ತರಾಟೆಗೆ ತೆಗೆದುಕೊಂಡಾಗ, 20 ಪೌಂಡ್​ ಹಣ ನೀಡಿ ಯುವಕರು ಹೊರ ನಡೆದಿದ್ದಾರೆ. ನಷ್ಟ ಭರ್ತಿಗಾಗಿ ಹೋಟೆಲ್​ನವರು ಪೊಲೀಸರಿಗೆ ದೂರು ನೀಡಿದರೂ, 'ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ' ಎಂದು ಪ್ರಕರಣ ದಾಖಲಿಸಿಲ್ಲ. (ಏಜೆನ್ಸೀಸ್)