ಅಮಾನತ್ತಾದ ಅಧಿಕಾರಿ 
ನ್ಯೂಸ್

ಮಹಿಳೆಯ ಜತೆ ಅಸಭ್ಯ ವರ್ತನೆ; ಐಪಿಎಸ್​ ಅಧಿಕಾರಿ ಅಮಾನತು

ಗೋವಾ: ಗೋವಾದ ಪ್ರಸಿದ್ದ ಬೀಚ್​ ಕ್ಲಬ್​​ ಒಂದರಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯವು ಐಪಿಎಸ್​ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಎ.ಕೋನ್​ ಅಮಾನತ್ತಾದ ಅಧಿಕಾರಿ ಎಂದು ತಿಳಿದು ಬಂದಿದೆ. 2009ರ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿರುವ ಇವರು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶ(AGMUT) ಕೇಡರ್​ನ ಅಧಿಕಾರಿಯಾಗಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇಂದ್ರ ಗೃಹ ಇಲಾಖೆಯೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ಡಿಐಜಿ ಶ್ರೇಣಿಯ ಅಧಿಕಾರಿಯಾಗಿರುವ ಕೋನ್​ ಸೋಮವಾರ ತಡರಾತ್ರಿ ಮಹಿಳಾ ಪ್ರವಾಸಿಗರೊಬ್ಬರ ಜೊತೆ ಬೀಚ್​ ಕ್ಲಬ್​ ಒಂದರಲ್ಲಿ ಅನುಚಿತವಾಗಿ ವರ್ತಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ರಾಜ್ಯ ಸರ್ಕಾರ ಸಲ್ಲಿಸಿದ ವರದಿಯನ್ನು ಆಧರಿಸಿ ಕೇಂದ್ರ ಗೃಹ ಇಲಾಖೆ ಕ್ರಮಕೈಗೊಂಡಿದೆ.

ಡಿಐಜಿ ಶ್ರೇಣಿಯ ಅಧಿಕಾರಿಯಾದ ಇವರನ್ನು ಆರಂಭದಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ರಾಜ್ಯ ಪೊಲೀಸ್​ ಮಹಾನಿರ್ದೇಶಕರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು.

ಮಹಿಳೆ ಜೊತೆ ಅಧಿಕಾರಿ ಅಸಭ್ಯವಾಗಿ ವರ್ತಿಸಿದ ವಿಚಾರವನ್ನು ಶಾಸಕರಾದ ವಿಜಯ್​ ಸರ್​ದೇಸಾಯಿ, ಮೈಕೆಲ್​ ಲೋಬೋ ರಾಜ್ಯ ವಿಧಾನಸಭೆ =ಯಲ್ಲಿ ಪ್ರಸ್ತಾಪಿಸಿ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದರು.