| ವಿಲಾಸ ಮೇಲಗಿರಿ ಬೆಂಗಳೂರು
ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ ಮತ್ತು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತದಾನ ಪದ್ಧತಿ ಜಾರಿಯಲ್ಲಿದೆ. ಡಿ.10ರಂದು ವಿಧಾನ ಪರಿಷತ್ನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮತದಾನ ಮಾಡುವ ವಿಧಾನ ಸಾಮಾನ್ಯ ಚುನಾವಣೆಗಿಂತ ಭಿನ್ನವಾಗಿದೆ. ಇಲ್ಲಿ ಪ್ರಾಶಸ್ತ್ಯ ಮತಗಳ ಆಧಾರದ ಮೇಲೆ ಫಲಿತಾಂಶ ಪ್ರಕಟವಾಗಲಿದೆ. ಈ ಚುನಾವಣೆಯಲ್ಲಿ ಯಾವುದೇ ಇವಿಎಂ ಬಳಕೆ ಇಲ್ಲ. ಬ್ಯಾಲೆಟ್ ಪೇಪರ್ನಲ್ಲೇ ಹಕ್ಕು ಚಲಾಯಿಸಬೇಕು.
6073 ಮತಗಟ್ಟೆ ಸ್ಥಾಪನೆ: 25 ಕ್ಷೇತ್ರಗಳ ಚುನಾವಣೆಗೆ 6073 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. 47,368 ಪುರುಷರು, 51,474 ಮಹಿಳೆಯರು, ಇತರ 3 ಸೇರಿದಂತೆ ಒಟ್ಟು 98,846 ಸದಸ್ಯರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಚುನಾವಣೆಗೆ 7073 ಪಿಆರ್ಒಗಳು, 9344 ಪಿಒಗಳು ಹಾಗೂ 6648 ಮೈಕ್ರೋ ಅಬ್ಸರ್ವರ್ಗಳನ್ನು ನಿಯುಕ್ತಿ ಮಾಡಲಾಗಿದೆ.
ಮತದಾನದ ವಿಧಾನ
- ಮತಪತ್ರದ ಜತೆಗೆ ಮತಗಟ್ಟೆಯಲ್ಲಿ ಕೊಡುವ ನೇರಳೆ ಬಣ್ಣದ ಇಂಕ್ ಪೆನ್ ಮಾತ್ರ ಬಳಸಿ ಮತ ಚಲಾಯಿಸಬೇಕು. ಬೇರೆ ಯಾವುದೇ ಪೆನ್, ಪೆನ್ಸಿಲ್, ಬಾಲ್ಪೆನ್ ಬಳಸುವಂತಿಲ್ಲ. ಇತರ ಸಾಧನ ಬಳಸಿ ಮತ ಚಲಾಯಿಸಿದರೆ ಅಂತಹ ಮತವನ್ನು ಅಸಿಂಧು ಎಂದು ಪರಿಗಣಿಸಲಾಗುವುದು.
- ಮೊದಲನೇ ಪ್ರಾಶಸ್ತ್ಯಾಗಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವಿರೋ ಆ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಮಾಡಲಾಗಿರುವ ಅಂಕಣದಲ್ಲಿ ಅಂಕಿ 1 ಎಂದು ಬರೆಯಬೇಕು. ಅಂಕಿ 1 ಅನ್ನು ಒಬ್ಬನೇ ಅಭ್ಯರ್ಥಿ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು.
- ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಚುನಾಯಿಸಬೇಕಿದ್ದ ಪಕ್ಷದಲ್ಲೂ ಅಂಕಿ 1 ಅನ್ನು ಒಬ್ಬನೇ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಬರೆಯಬೇಕು.
- ಚುನಾಯಿಸಬೇಕಾಗಿರುವ ಅಭ್ಯರ್ಥಿಗಳ ಸಂಖ್ಯೆ ಎಷ್ಟೇ ಇದ್ದರೂ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆಯಷ್ಟೇ ಪ್ರಾಶಸ್ತ್ಯಳನ್ನು ಬಳಸಬಹುದು. ಉದಾಹರಣೆಗೆ- ಚುನಾಯಿಸಬೇಕಾಗಿರುವ ಸ್ಥಾನ ಒಂದು ಅಥವಾ ಎರಡು ಆಗಿದ್ದು, ಐವರು ಸ್ಪರ್ಧಿಸಿದ್ದಲ್ಲಿ ನಿಮ್ಮ ಪ್ರಾಶಸ್ತ್ಯ ಕ್ರಮದಲ್ಲಿ ಐದು ಪ್ರಾಶಸ್ತ್ಯಳನ್ನು ಗುರುತು ಹಾಕಬಹುದು.
- ಉಳಿದ ಅಭ್ಯರ್ಥಿಗಳಿಗೆ ನಿಮ್ಮ ಮುಂದಿನ ಪ್ರಾಶಸ್ತ್ರಗಳನ್ನು ಗುರುತು ಹಾಕುವುದಕ್ಕಾಗಿ ಅಂತಹ ಅಭ್ಯರ್ಥಿಗಳ ಹೆಸರುಗಳ ಮುಂದೆ ಒದಗಿಸಲಾಗಿರುವ ಪ್ರಾಶಸ್ತ್ಯ ಕ್ರಮ ಎಂಬ ಅಂಕಣದಲ್ಲಿ ತರುವಾಯದ ಅಂಕಿಗಳಾದ 2, 3, 4 ಇತ್ಯಾದಿಗಳನ್ನು ಪ್ರಾಶಸ್ತ್ಯ ಕ್ರಮದಲ್ಲಿ ಗುರುತು ಹಾಕಬೇಕು.
- ಯಾರೇ ಒಬ್ಬ ಅಭ್ಯರ್ಥಿ ಹೆಸರಿನ ಮುಂದೆ ಕೇವಲ 1 ಅಂಕಿಯನ್ನು ಮಾತ್ರ ಗುರುತು ಹಾಕಬೇಕು. ಅದೇ ಅಂಕಿಯನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳ ಮುಂದೆ ಗುರುತು ಹಾಕಿದರೆ ಮತ ಅಸಿಂಧುವಾಗುತ್ತದೆ. ? ಪ್ರಾಶಸ್ತ್ಯವನ್ನು ಅಂಕಿಗಳ ಮೂಲಕ ಮಾತ್ರ ಅಂದರೆ 1, 2, 3, ಇತ್ಯಾದಿ ಕ್ರಮದಲ್ಲಿ ಮಾತ್ರ ಗುರುತು ಹಾಕಬೇಕು. ಇದರ ಬದಲಾಗಿ ಒಂದು, ಎರಡು, ಮೂರು ಇತ್ಯಾದಿ ಅಕ್ಷರಗಳ ರೂಪದಲ್ಲಿ ಬರೆಯುವಂತಿಲ್ಲ.
- ಮತಪತ್ರದ ಮೇಲೆ ನಿಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯುವಂತಿಲ್ಲ. ಸಹಿ ಅಥವಾ ಇನ್ಶಿಯಲ್ಗಳನ್ನು ಹಾಕುವಂತಿಲ್ಲ. ಹೆಬ್ಬೆಟ್ಟಿನ ಗುರುತೂ ಹಾಕುವಂತಿಲ್ಲ. ಹಾಗೆ ಮಾಡಿದರೆ ಮತಪತ್ರ ಅಸಿಂಧುವಾಗುತ್ತದೆ.
- ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಅಂಕಿ 1 ಅನ್ನು ಗುರುತು ಹಾಕಬೇಕು. ಇಡೀ ಮತ ಪತ್ರದಲ್ಲಿ ಮೊದಲ ಪ್ರಾಶಸ್ತ್ಯ ಮತ ಗುರುತಿಸದೆ 2,3,4.... ಮಾತ್ರ ಹಾಕಿದರೂ ಮತ ಅಸಿಂಧುವಾಗುತ್ತದೆ.
14ಕ್ಕೆ ಮತ ಎಣಿಕೆ: ಡಿ.14ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ. 20 ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ಎಣಿಕೆಯ ರೀತಿ-ನೀತಿ
- ಪ್ರಾಶಸ್ತ್ಯ ಮತದ ವಿಚಾರದಲ್ಲಿ ಮತದಾನದಂತೆಯೇ ಮತ ಎಣಿಕೆಯೂ ವಿಭಿನ್ನವಾಗಿದೆ. ನೋಟಾ ಚಲಾವಣೆಗೂ ಅವಕಾಶವಿದೆ.
- ಕ್ರಮಬದ್ಧ ಮತಗಳು 4000/2+1 (ಅಂದರೆ 4000 ಮತಗಳನ್ನು 2 ಭಾಗವಾಗಿ ವಿಭಾಗಿಸಿದರೆ, 2000 ಮತಗಳಾಗುತ್ತವೆ. ಇವುಗಳ ಮೇಲ್ಪಟ್ಟು 1 ಮತ) ಪಡೆದರೂ ಅವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ. ನಂತರದ ಮತಗಳನ್ನು ಎಣಿಸುವುದಿಲ್ಲ.
- ಕ್ರಮಬದ್ಧ ಮತಗಳ ಪೈಕಿ ಯಾರಿಗೂ ಗೆಲ್ಲುವಷ್ಟು ಮತ ಬಾರದೆ ಹೋದಲ್ಲಿ 2ನೇ ಪ್ರಾಶಸ್ತ್ಯ ಮತಗಳನ್ನು ಎಣಿಕೆಗೆ ಪರಿಗಣಿಸಲಾಗುತ್ತದೆ.
- ಅತ್ಯಂತ ಕಡಿಮೆ ಮತ ಪಡೆದು ಎಲಿಮಿನೇಟ್ ಆಗುವ ಅಭ್ಯರ್ಥಿಯಿಂದ 2ನೇ ಪ್ರಾಶಸ್ತ್ಯ ಮತ ಎಣಿಕೆ ನಡೆಯಲಿದೆ.
- ಗೆಲುವಿಗೆ ಬೇಕಾದ ಮತಗಳನ್ನು ಯಾವೊಬ್ಬ ಅಭ್ಯರ್ಥಿಯೂ ಪಡೆಯದೆ ಇದ್ದರೆ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜೇತರೆಂದು ಘೋಷಿಸಲಾಗುತ್ತದೆ.
ದ್ವಿಸದಸ್ಯ ಕ್ಷೇತ್ರದಲ್ಲೂ ಒಬ್ಬರಿಗಷ್ಟೇ ಮೊದಲ ಪ್ರಾಶಸ್ತ್ಯ: ಮೇಲ್ಮನೆಗೆ ಸ್ಥಳೀಯ ಸಂಸ್ಥೆಯ 25 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಮೈಸೂರು, ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ, ವಿಜಯಪುರ ದ್ವಿಸದಸ್ಯ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲೂ ಒಬ್ಬ ಅಭ್ಯರ್ಥಿಗೆ ಮಾತ್ರ ಮೊದಲ ಪ್ರಾಶಸ್ತ್ಯ ಮತ ಹಾಕಬೇಕು. ಮೊದಲು ಅರ್ಹ ಮತ ಪಡೆದವರನ್ನು ವಿಜೇತರೆಂದು ಘೋಷಿಸಿ, ತರುವಾಯದ ಮತ ಎಣಿಕೆಯಲ್ಲಿ ಯಾರು ಅರ್ಹ ಮತ ಪಡೆಯುತ್ತಾರೋ ಅವರನ್ನು 2ನೇ ವಿಜೇತ ಅಭ್ಯರ್ಥಿ ಎಂದು ಪ್ರಕಟಿಸಲಾಗುತ್ತದೆ.
ಎಷ್ಟು ಅಭ್ಯರ್ಥಿ? ಯಾವ ಪಕ್ಷ?: 25 ಕ್ಷೇತ್ರಗಳಲ್ಲಿ ಒಟ್ಟು 90 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಪೈಕಿ 89 ಪುರುಷರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಸ್ಪರ್ಧಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಜೆಡಿಎಸ್ 6, ಆಮ್ ಆದ್ಮಿ 3, ರೈತ ಭಾರತ್ ಪಾರ್ಟಿ 1, ಕರ್ನಾಟಕ ರಾಷ್ಟ್ರ ಸಮಿತಿ 1, ಕನ್ನಡ ಚಳವಳಿ ವಾಟಾಳ್ ಪಕ್ಷ 1, ಜನತಾ ಪಾರ್ಟಿ 2, ಜನಹಿತ ಪಕ್ಷ 1, ಜೆಡಿಯು 1, ಎಸ್ಡಿಪಿಐ 1, ಪಕ್ಷೇತರರು 33 ಸೇರಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ.