ಕೋಲ್ಕತ್ತಾ: ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ನಿಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗವನ್ನು (ECI) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ. ಅಲ್ಲದೆ, ಇದನ್ನು ಸೂಪರ್ ತುರ್ತು ಪರಿಸ್ಥಿತಿ ಎಂದು ಕರೆದಿದ್ದಾರೆ.
ಉತ್ತರ ಬಂಗಾಳದಲ್ಲಿ ನಡೆದ ಆಡಳಿತ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಸರ್ಕಾರವು ಮುಂದಿನ ಮೂರು ತಿಂಗಳ ಕಾಲ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಂತೆ ಚುನಾವಣಾ ಅಧಿಕಾರಿಗಳನ್ನು ಚುನಾವಣಾ ಕಾರ್ಯನಿರತವಾಗಿರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಪ್ರಕ್ರಿಯೆಗೆ ತಡೆ ವಿಧಿಸಬೇಕು ಎಂದು ಹೇಳಿದ್ದಾರೆ.
ಇದು ಜನರನ್ನು ಕೆಣಕುವ ಉದ್ದೇಶಪೂರ್ವಕ ಪ್ರಯತ್ನವಾಗಿದ್ದು, ಇದರಲ್ಲಿ ಎಷ್ಟೋ ಜನರು ಸಾವನ್ನಪ್ಪಿದ್ದಾರೆ. ಚುನಾವಣಾ ಆಯೋಗದಿಂದ ಒಂದೇ ಒಂದು ಸಂತಾಪ ಸಂದೇಶವೂ ಬಂದಿಲ್ಲ ಎಂದು ಬಂಗಾಳ ಸಿಎಂ ಹೇಳಿದರು. ನೀವು ನನ್ನನ್ನು ಜೈಲಿಗೆ ಕಳುಹಿಸಬಹುದು ಅಥವಾ ನನ್ನ ಕತ್ತು ಕತ್ತರಿಸಬಹುದು. ಆದರೆ ಒಬ್ಬನೇ ಒಬ್ಬ ನಿಜವಾದ ಮತದಾರನ ಹೆಸರನ್ನು ಕತ್ತರಿಸಬೇಡಿ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಮೊದಲ ಹಂತದ ಮತದಾನದ ಲಿಂಗವಾರು ಡೇಟಾ ಬಹಿರಂಗಪಡಿಸದ ಚು. ಆಯೋಗ; ತೇಜಸ್ವಿ ಯಾದವ್ ಕಿಡಿ| Tejashwi Yadav
ಭಾರತದ ಭದ್ರತಾ ಪರಿಸ್ಥಿತಿ ಮತ್ತು ಒಳನುಸುಳುವಿಕೆ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆಯೂ ಮಮತಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆಂತರಿಕ ಭದ್ರತೆ, ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ಅವರ ಜವಾಬ್ದಾರಿಯಲ್ಲಿದೆ ಎಂದಿದ್ದಾರೆ.
ಎಸ್‌ಐಆರ್ ಬಗ್ಗೆ ಮಮತಾ ಬ್ಯಾನರ್ಜಿ ಅವರ ನಿಲುವು
ಕಳೆದ ವಾರ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಈ ಪ್ರಕ್ರಿಯೆಯ ವಿರುದ್ಧ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಒಬ್ಬ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಪತನ ಅನಿವಾರ್ಯ ಎಂದು ಕಿಡಿಕಾರಿದ್ದರು.
ಚುನಾವಣಾ ಆಯೋಗವು ಬಿಜೆಪಿಗೆ ರಾಜಕೀಯ ಸಾಧನವಾಗಿದೆ. ಪರಿಷ್ಕರಣೆ ಅಭಿಯಾನವನ್ನು ಆಯ್ದ ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ನಡೆಸಲಾಗುತ್ತಿದೆ. SIR ಕಾನೂನುಬದ್ಧ ಮತದಾರರನ್ನು ಬೆದರಿಸುವ ಮತ್ತು ಮತದಾನದ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಬಂಗಾಳ ಸಿಎಂ ಆರೋಪಿಸಿದ್ದಾರೆ.(ಏಜೆನ್ಸೀಸ್)