ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮನೆಯ ಸ್ಲ್ಯಾಬ್ ಕುಸಿದು ದುರಂತ 
ನ್ಯೂಸ್

ಡಿಜೆ ಸೌಂಡ್‌ಗೆ ಕುಸಿಯಿತೇ ಸ್ಲ್ಯಾಬ್? ಒಬ್ಬ ಸಾವು, ಹಲವರಿಗೆ ಗಾಯ; ಗಣೇಶ ವಿಸರ್ಜನೆ ವೇಳೆ ದುರಂತ! | Odisha Ganesh Immersion

ಒಡಿಶಾದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮನೆಯ ಸ್ಲ್ಯಾಬ್ ಕುಸಿದು ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭಾರಿ ಶಬ್ದದ ಡಿಜೆ ಹಾಗೂ ಅದರಿಂದ ಉಂಟಾದ ಕಂಪನದಿಂದಲೇ ಸ್ಲ್ಯಾಬ್ ಕುಸಿದಿದ್ದಾ? ಎಂಬ ಬಗ್ಗೆ ತನಿಖೆ ನಡೆಯಲಿದೆ.

Khordha Ganesh Immersion: ಒಡಿಶಾದಲ್ಲಿ ಸಂಭ್ರಮದಿಂದ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಡಿಜೆ ಸೌಂಡ್‌ನಿಂದ ಮನೆಯೊಂದರ ಸ್ಲ್ಯಾಬ್ ಕುಸಿದು ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನಲಾದ ಘಟನೆ ಇದೀಗ ಆತಂಕ ಮೂಡಿಸಿದೆ.

ಖೋರ್ಧಾ ಜಿಲ್ಲೆಯ ಜಟ್ನಿಯಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮನೆಯ ಎರಡನೇ ಮಹಡಿಯಿಂದ ಹೊರಚಾಚಿಕೊಂಡಿದ್ದ ಸ್ಲ್ಯಾಬ್ ಏಕಾಏಕಿ ಕುಸಿದು, ಕೆಳಗಿದ್ದವರ ಮೇಲೆ ಬಿದ್ದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ನರಸಿಂಹ ಭೋಳಾ ತಿಳಿಸಿದ್ದಾರೆ.

ದುರಂತದಲ್ಲಿ ವ್ಯಕ್ತಿ ಸಾವು

ಘಟನೆಯಲ್ಲಿ ಹರಿರಾಜ್‌ಪುರದ ನಿವಾಸಿ ಬಿಸ್ವಜಿತ್ ಬರಿಕ್ ಮೃತಪಟ್ಟಿದ್ದಾರೆ. ಗಾಯಗೊಂಡ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಮೂವರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಗಾಯಾಳುಗಳಿಗೆ ರಾಜಧಾನಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಜೆ ಸೌಂಡ್‌ನಿಂದ ಉಂಟಾದ ಅವಘಡ?

ಡಿಜೆ ಸೌಂಡ್‌ನಿಂದಲೇ ಸ್ಲ್ಯಾಬ್ ಕುಸಿದಿತ್ತಾ?

ಭಾರಿ ಶಬ್ದದ ಡಿಜೆ ಸೌಂಡ್‌ನಿಂದ ಉಂಟಾದ ಕಂಪನವೇ ಸ್ಲ್ಯಾಬ್ ಕುಸಿಯಲು ಕಾರಣವಾಯ್ತಾ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಸೌಂಡ್ ಎಂಜಿನಿಯರ್ ಹಾಗೂ ಕಟ್ಟಡ ಸುರಕ್ಷತಾ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಸ್ಲ್ಯಾಬ್ ಕುಸಿತಕ್ಕೆ ನಿಜವಾದ ಕಾರಣ ಏನು ಎಂಬುದು ತನಿಖೆಯ ಬಳಿಕ ಸ್ಪಷ್ಟವಾಗಲಿದೆ.

ಡಿಜೆಗೆ ನಿರ್ಬಂಧವಿದ್ದರೂ ಬಳಕೆ?

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಬಳಸಲು ಪೊಲೀಸರು ಅನುಮತಿ ನೀಡಿರಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ನರಸಿಂಹ ಭೋಳಾ ತಿಳಿಸಿದ್ದಾರೆ. ಘಟನೆಗೆ ನಿಖರ ಕಾರಣ ಏನು ಎಂಬುದು ಪತ್ತೆಯಾದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಸಿಜೆಪಿ ನಾಯಕರ ವಶಕ್ಕೆ; ವಾಲಂಟಿಯರ್ ಮೀಟ್‌ಗೂ ಮುನ್ನ ಆಶುತೋಷ್ ರಂಕಾ ಬಂಧನ | CJP Volunteer Meet

ಒಡಿಶಾದಲ್ಲಿ ಡಿಜೆ ಹಾಗೂ ಧ್ವನಿವರ್ಧಕಗಳ ಬಳಕೆಯ ಬಗ್ಗೆ ಇತ್ತೀಚೆಗೆ ಚರ್ಚೆ ನಡೆದಿದೆ. ಸೆಪ್ಟೆಂಬರ್‌ನಲ್ಲಿ ಒಡಿಶಾ ಹೈಕೋರ್ಟ್, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿಜೆ ಹಾಗೂ ಇತರ ಧ್ವನಿ ವ್ಯವಸ್ಥೆ ಬಳಸುವ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಜಗತ್‌ಸಿಂಗ್‌ಪುರ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. (ಏಜೆನ್ಸೀಸ್)