ನ್ಯೂಸ್

ಕೈ ಅಭ್ಯರ್ಥಿಯಾಗಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಬಯಸಿದ್ರಾ ನಟ ದರ್ಶನ್?; ಹೊಸ ಟ್ವಿಸ್ಟ್​ ಕೊಟ್ಟ ಯೋಗೇಶ್ವರ್!

ಚನ್ನಪಟ್ಟಣ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಸೇರಿದಂತೆ 13ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ತನಿಖೆ ತೀವ್ರಗೊಳ್ಳುತ್ತಿದ್ದಂತೆ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇತ್ತ ಮಾಜಿ ಸಚಿವ, ವಿಧಾನಪರಿಷತ್​ ಸದಸ್ಯ ಸಿಪಿ. ಯೋಗೇಶ್ವರ್​ ಹೊಸ ಬಾಂಬ್​ ಒಂದನ್ನು ಸಿಡಿಸಿದ್ದು, ಡಿಕೆ ಬ್ರದರ್ಸ್​ಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ.

18ನೇ ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್​ 04ರಂದು ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಫಲ ನೀಡಿದ್ದು, 17+2 ಸ್ಥಾನಗಳನ್ನು ಗೆದ್ದುಕೊಂಡಿವೆ. ನಿರೀಕ್ಷಯಂತೆ ಮಂಡ್ಯದಲ್ಲಿ ಮಾಜಿ ಸಿಎಂ ಎಚ್​.ಡಿ. ಕುಮಾರ್​ಸ್ವಾಮಿ ಭರ್ಜರಿ ಜಯ ಗಳಿಸಿದ್ದು, ರಾಜ್ಯ ರಾಜಕಾರಣದಿಂದ ಕೇಂದ್ರದ ಕಡೆ ಮುಖ ಮಾಡಿದ್ದಾರೆ. ಚನ್ನಪಟ್ಟಣ್ಣ ಕ್ಷೇತ್ರದ ಶಾಸಕರಾಗಿದ್ದ ಅವರು ಇದೀಗ ಸಂಸದರಾಗಿ ಆಯ್ಕೆಯಾಗಿದ್ದು, ಎಂಎಲ್​ಎ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಚನ್ನಪಟ್ಟಣ್ಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಇದಾದ ಬಳಿಕ ಅವರ ಕ್ಷೇತ್ರದಲ್ಲಿ ಯಾರು ಸ್ಪರ್ಧೆಗಿಳಿಯುತ್ತಾರೆ ಎಂಬ ಕುತೂಹಲ ಶುರುವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್​ ನಾನು ಸ್ಪರ್ಧಿಸುವುದಿಲ್ಲ ಚನ್ನಪಟ್ಟಣದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.

ಇನ್ನೂ ಈ ಕುರಿತು ಪ್ರತಿಕ್ರಿಯಿಸಿದ ಸಿ.ಪಿ. ಯೋಗೇಶ್ವರ್, ಮುಂಬರುವ ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್​ನಿಂದ ಅಚ್ಚರಿ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್​ ಹೇಳಿದ್ದರು. ಆದರೆ, ಅವರು ಹೇಳಿರುವ ಅಚ್ಚರಿ ಅಭ್ಯರ್ಥಿ, ಚಿತ್ರನಟ ಸದ್ಯ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿದ್ದಾನೆ. ಕಾಂಗ್ರೆಸ್ ನಾಯಕರ ಸಖ್ಯ ಹೊಂದಿದ್ದ ಈತ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಹೆಚ್ಚು ಪ್ರಚಾರ ಮಾಡಿದ್ದರು. ಆತ ಈಗ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿದ್ದಾನೆ. ಆತನೇ ಡಿ.ಕೆ.ಸುರೇಶ್ ಹೇಳಿರುವ ಅಚ್ಚರಿ ಅಭ್ಯರ್ಥಿ ಎಂದು ಹೊಸ ಟ್ವಿಸ್ಟ್​ ನೀಡಿದ್ದಾರೆ.

ಸದ್ಯ ಜೈಲುಪಾಲಾಗಿರುವ ವ್ಯಕ್ತಿಯನ್ನು ಡಿಕೆ ಬ್ರದರ್ಸ್​ ಕಾಂಗ್ರೆಸ್​ಗೆ ಸೇರಿಸಿಕೊಂಡು ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿ ಮಾಡಲು ಹೊರಟಿದ್ದರು. ಆ ವ್ಯಕ್ತಿ ಯಾರೆಂದು ನೀವೇ ಊಹಿಸಿಕೊಳ್ಳಿ ಎಂದು ಹೇಳುವ ಮೂಲಕ ವಿಧಾನಪರಿಷತ್​ ಸದಸ್ಯ ಸಿಪಿ ಯೋಗೇಶ್ವರ್​ ಹೊಸ ಬಾಂಬ್​ ಒಂದನ್ನು ಸಿಡಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ತಲ್ಲಣವನ್ನು ಸೃಷ್ಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂದು ಕಾದುನೋಡಬೇಕಿದೆ.