ಹಾಸನ ಡಿಸಿ ಲತಾ ಕುಮಾರಿ ವರ್ಗಾವಣೆ ತಡೆಯಲು 75 ಲಕ್ಷ ರೂ. ಲಂಚ ನೀಡಿದ್ದಾರೆ ಎಂದ ಹೆಚ್.ಡಿ.ಕೆ
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಕುಮಾರಸ್ವಾಮಿ ಗಂಭೀರ ಲಂಚದ ಆರೋಪ
ಮಾಧ್ಯಮಗಳ ಮುಂದೆ ಡಿಸಿ ಪಿಎ ಶಶಿಕಿರಣ್ ಅವರ ವಾಟ್ಸಾಪ್ ಚಾಟ್ಗಳನ್ನು ತೋರಿಸಿದ ಕೇಂದ್ರ ಸಚಿವ
ಬೆಂಗಳೂರು: ವರ್ಗಾವಣೆ ತಪ್ಪಿಸಿಕೊಳ್ಳಲು ಹಾಸನ ಡಿಸಿ ಲತಾ ಕುಮಾರಿ 75 ಲಕ್ಷ ರೂ. ಲಂಚ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರೇ ಈ ಹಣ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಹಾಸನಾಂಬೆ ದರ್ಶನ ಪಡೆದ ಬೆನ್ನಲ್ಲೇ ಹೆಚ್.ಡಿ. ಕುಮಾರಸ್ವಾಮಿ ಶಾಕಿಂಗ್ ಚಾಟ್ ಲೀಕ್ ಮಾಡಿದ್ದಾರೆ! ಡಿಸಿ ಲತಾ ಕುಮಾರಿ ಪಿಎ ಶಶಿಕಿರಣ್ ಹಾಗೂ ಮಧ್ಯವರ್ತಿಯ ನಡುವಿನ ವಾಟ್ಸಾಪ್ ಸಂಭಾಷಣೆ ಪ್ರತಿಯನ್ನು ಬಿಡುಗಡೆ ಮಾಡಿದ ಹೆಚ್‌ಡಿಕೆ, ಕಚೇರಿಯ ಅಕ್ರಮಗಳನ್ನು ಮಾಧ್ಯಮಗಳ ಮುಂದೆ ತೋರಿಸಿದರು.
ಭೂ ಪರಿವರ್ತನೆ ಮತ್ತು ಪರ್ಮಿಷನ್ ನೀಡಲು ಮಧ್ಯವರ್ತಿಗಳ ಬಳಸಿ ಕ್ರಷರ್ ಮಾಲೀಕರು ಹಾಗೂ ಲೇಔಟ್ ಡೆವಲಪರ್‌ಗಳಿಂದ ಲಂಚ ವಸೂಲಿ ಮಾಡಲಾಗುತ್ತಿದೆ ಎಂದು ಹೆಚ್‌ಡಿಕೆ ದೂರಿದರು. ಪಿಎ ಶಶಿಕಿರಣ್ ಸಂಗ್ರಹಿಸಿದ ಈ ಅಕ್ರಮ ಹಣ ಡಿಸಿಗೆ ತಲುಪುತ್ತಿತ್ತು, ಇದರಲ್ಲಿ 75 ಲಕ್ಷ ರೂಪಾಯಿಯನ್ನು ಸಚಿವ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಕೊಟ್ಟು ವರ್ಗಾವಣೆ ತಡೆಯಲಾಗಿದೆ ಎಂದು ಅವರು ಆರೋಪಿಸಿದರು.
ಕೇಂದ್ರ ಸಚಿವರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ, ಇದನ್ನು ತಮ್ಮ ತೇಜೋವಧೆ ಮಾಡಲು ಹೆಣೆದಿರುವ ಸುಳ್ಳು ಸಂಚು ಎಂದಿದ್ದಾರೆ. ‘ನಾವು ಎಂದಿಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ, ನಮ್ಮ ಪಿಎ ಅಥವಾ ವಿಭಾಗದಿಂದ ತಪ್ಪು ಸಂದೇಶಗಳು ಹೋಗಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು. ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತಿದ್ದು, ಸಂಪೂರ್ಣ ತನಿಖೆಯಾದ ನಂತರ ಸತ್ಯ ಹೊರಬರಲಿದೆ’ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ