ನ್ಯೂಸ್

ಹಿರಿತೆರೆಯಿಂದ ಕಿರುತೆರೆಯಲ್ಲಿ ಮಿಂಚಲು ಸಜ್ಜಾದ ಹರಿಪ್ರಿಯಾ

Webdesk - Manjunatha B

ಬೆಂಗಳೂರು: ತಮ್ಮ ನಟನೆ ಹಾಗೂ ವಿಭಿನ್ನ ಮ್ಯಾನರಿಸಂ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಯಾಂಡಲ್​ವುಡ್​ ಬ್ಯೂಟಿ ಹರಿಪ್ರಿಯಾ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲೂ ಗುರುತಿಸಿಕೊಂಡಿದ್ದಾರೆ. ಮದುವೆಯಾದ ಬಳಿಕವೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಹರಿಪ್ರಿಯಾ ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿದ್ದಾರೆ.

ಈ ಬಾರಿ ಅವರು ಹಿರಿತೆರೆಯ ಬದಲಾಗಿ ಕಿರುತೆರೆಯಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್​ ಸುವರ್ಣದಲ್ಲಿ ಈ ಬಗ್ಗೆ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಹರಿಪ್ರಿಯಾ ಧಾರಾವಾಹಿಯಲ್ಲೂ ನಟಿಸಲು ಸಜ್ಜಾಗಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಲು ಶುರುವಾಗಿದೆ.

ಸದ್ಯ ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರ ಆಗಿ ಬರ್ತಿದ್ದಾರೆ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ಶೀಘ್ರದಲ್ಲಿ ಎಂದು ಅಡಿಬರಹವನ್ನು ನೀಡಲಾಗಿದೆ. ಈ ಪ್ರೋಮೋದಲ್ಲಿ ನಟಿ ಹರಿಪ್ರಿಯಾ ವಕೀಲೆಯಾಗಿ ಕಾಣಿಸಿಕೊಂಡಿದ್ದು, ಇದು ಸಿನಿಮಾನೋ ಅಥವಾ ಧಾರಾವಾಹಿನೋ ಎಂಬುದು ತಿಳಿದು ಬಂದಿಲ್ಲ.

ಇತ್ತ ಪ್ರೋಮೋ ನೋಡಿ ಕಮೆಂಟ್​ ಮಾಡಿರುವ ನೆಟ್ಟಿಗರು ಸಿನಿಮಾ ಬಿಟ್ಟು ಸೀರಿಯಲ್​ಗೆ ಬರಬೇಡಿ ಅಲ್ಲೇ ಚೆನ್ನಾಗಿದ್ದೀರಾ. ನೀವು ನಿಜವಾಗಿಯೂ ಸೀರಿಯಲ್​ ಮಾಡುತ್ತಿದ್ದೀರಾ ಅಥವಾ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದೀರಾ ಏನೇ ಇದ್ದರೂ ಸರಿಯಾಗಿ ಹೇಳಿ ಎಂದು ಹಲವರು ಕಮೆಂಟ್​ ಮೂಲಕ ಆಗ್ರಹಿಸಿದ್ದಾರೆ. ನಟಿ ಹರಿಪ್ರಿಯಾ ಪ್ರಸ್ತುತ ಬೆಲ್ ಬಾಟಮ್ 2, ಹ್ಯಾಪಿ ಎಂಡಿಂಗ್, ಲಗಾಮ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.