ಚಿತ್ರದುರ್ಗ: ರಾಜ್ಯದ 23 ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ತಾಲೂಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಿಸುತ್ತಿದ್ದ ಗುತ್ತಿಗೆ ಕಂಪನಿಗೆ ರಾಜ್ಯಸರ್ಕಾರ ನೋಟಿಸ್ ಕೊಡಲು ಸಿದ್ಧತೆ ನಡೆಸಿದೆ. ಕರೊನಾ ಸಂಕಷ್ಟ ಆರಂಭದ ಮೊದಲೇ ಈ ಕೇಂದ್ರಗಳ ನಿರ್ವಹಣೆ ಕುರಿತಂತೆ ಸಾಕಷ್ಟು ಅಸಮಾಧಾನದ ದನಿ ಕೇಳಿಬಂದಿತ್ತು.
ಡಯಾಲಿಸಿಸ್‌ಗೆ ಅಗತ್ಯ ಔಷಧ,ಉಪಕರಣಗಳನ್ನು ತರುವಂತೆ ಹೇಳುತ್ತಿದ್ದರಿಂದಾಗಿ ಬಡ ರೋಗಿಗಳು ಪರದಾಡುವಂತಾಗಿತ್ತು. ಸರ್ಕಾರ ಅಂದಾಜು ೨೦ ಕೋಟಿ ರೂ.ಪಾವತಿಸಬೇಕಿದ್ದು,ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಕೇಂದ್ರಗಳಲ್ಲಿದ್ದ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ರೋಗಿಗಳು ತಿಳಿಸಿದ್ದರು. ರೋಗಿಗಳಿಗೆ ಆಗುತ್ತಿರುವ ತೊಂದರೆಯ ಕುರಿತಂತೆ ವಿಜಯವಾಣಿ ಪತ್ರಿಕೆ ಇತ್ತೀಚೆಗೆ ಆರೋಗ್ಯ ಇಲಾಖೆ ಆಯುಕ್ತ ಕೆ.ಪಂಕಜ್ ಕು ಮಾರ್‌ಪಾಂಡೆ ಅವರನ್ನು ಸಂಪರ್ಕಿಸಿದಾಗ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ಕೇಂದ್ರಗಳ ನಿರ್ವಹಣೆಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಭರವಸೆ ಕೊಟ್ಟಿದ್ದರು.
ಶುಕ್ರವಾರ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಿದ್ದ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್,ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಖಾಸಗಿ ಕಂಪನಿ ಹಣಕಾಸು ತೊಂದರೆಯಿಂದ ಬಳಲುತ್ತಿದೆ ಎಂದಿದ್ದರು. ಇದೇ ವೇಳೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದು ಕೊಳ್ಳಲಾಗುವುದು, ಆದರೂ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಇಲಾಖೆ ಅಽಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದರು.
ಏತನ್ಮಧ್ಯೆ ಪ್ರಸ್ತುತ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಕಂಪನಿಯ ನಿರ್ವಹಣಾ ಅವಧಿ ಕೆಲದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದ್ದು, ಕಂಪನಿಗೆ ನೋಟಿಸ್ ಕೊಡಲು ಸರ್ಕಾರ ಸಿದ್ಧತೆ ನಡೆದಿದೆ, ನೋಟಿಸ್‌ಗೆ ಆಯುಕ್ತರ ಸಹಿ ಆಗ ಬೇಕಿದೆ ಎಂದು ಇಲಾಖೆ ಮೂಲಗಳು ಖಚಿತ ಮಾಹಿತಿ ನೀಡಿವೆ.