ನ್ಯೂಸ್

ದೆವ್ವ ನೋಡಿಲ್ಲ ಆದರೂ ಭಯ!; ‘ಖುಷಿ’ಯಾಗಿ ಹೆದರಿಸಲು ಬರುತ್ತಿದ್ದಾರೆ ದಿಯಾ ನಟಿ

ಬೆಂಗಳೂರು: ‘ದಿಯಾ’ ಚಿತ್ರದಲ್ಲಿ ಅಳಿಸಿದ್ದ ಖುಷಿ ರವಿ ಇದೀಗ ಮೂರು ವರ್ಷಗಳ ಬಳಿಕ ‘ಸ್ಪೂಕಿ ಕಾಲೇಜ್’ನಲ್ಲಿ ಹೆದರಿಸಲು ರೆಡಿಯಾಗಿದ್ದಾರೆ. ಚಿತ್ರ, ಪಾತ್ರ ಹಾಗೂ ದೆವ್ವಗಳ ಬಗ್ಗೆ ಖುಷಿ, ಖುಷಿಯಾಗಿಯೇ ವಿಜಯವಾಣಿ ಜತೆ ಮಾತಿಗೆ ಸಿಕ್ಕರು. ‘‘ಸ್ಪೂಕಿ ಕಾಲೇಜ್’ ಹಾರರ್ ಜಾನರ್ ಚಿತ್ರ. ತಾಂತ್ರಿಕವಾಗಿ ತುಂಬ ಸ್ಟ್ರಾಂಗ್ ಸಿನಿಮಾ. ಭರತ್ ಅವರಿಗಿದು ಮೊದಲ ಚಿತ್ರ ಅಂತನ್ನಿಸುವುದಿಲ್ಲ. ಅಷ್ಟು ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. ನಾನಿಲ್ಲಿ ಖುಷಿ ಎಂಬ ಕಾಲೇಜು ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ. ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತೇನೆ’ ಎಂದು ಹೇಳಿಕೊಳ್ಳುತ್ತಾರೆ.

ಹಾಗಾದರೆ ನೀವು ದೆವ್ವ, ಭೂತಗಳನ್ನು ನಂಬುತ್ತೀರಾ? ನಿಜ ಜೀವನದಲ್ಲಿ ಹಾರರ್ ಅನುಭವವಾಗಿದೆಯಾ? ಎಂದು ಕೇಳಿದರೆ, ‘ನನಗೆ ದೆವ್ವ, ಭೂತಗಳ ಹಾರರ್ ಅನುಭವವಾಗಿಲ್ಲ. ಆದರೆ ಫ್ರೆಂಡ್ಸ್, ಸಂಬಂಧಿಕರಿಗೆ ಆದ ಅನುಭವಗಳನ್ನು ಕೇಳಿದ್ದೇನೆ. ನಾನಂತೂ ತುಂಬ ಹೆದರುತ್ತೇನೆ. ಹೊರಗೆ ಸೌಂಡ್ ಬಂದರೂ ಸಾಕು, ಸುಮ್ಮನೆ ಕಣ್ಣುಮುಚ್ಚಿಕೊಂಡು ಕುಳಿತುಕೊಂಡುಬಿಡುತ್ತೇನೆ. ಪಾಸಿಟಿವ್ ಎನರ್ಜಿ ನಂಬುವವರು, ನೆಗಟಿವ್ ಎನರ್ಜಿಯನ್ನೂ ನಂಬಲೇಬೇಕಲ್ಲವೇ?’ ಎಂದು ನಗುತ್ತಾರೆ ಖುಷಿ.

ಇನ್ನು ಚಿತ್ರೀಕರಣದ ಬಗ್ಗೆ ಮಾತನಾಡುವ ಅವರು, ‘ನಾವು 110 ವರ್ಷಗಳಷ್ಟು ಹಳೆಯ ಧಾರವಾಡದ ಕಾಲೇಜ್ ಒಂದರಲ್ಲಿ ಚಿತ್ರೀಕರಣ ಮಾಡಿದ್ದು. ಆ ಕಟ್ಟಡ ಅದಕ್ಕೂ ಮೊದಲು ರೈಲ್ವೆ ನಿಲ್ದಾಣವಾಗಿತ್ತಂತೆ. ಲಾಕ್​ಡೌನ್ ಮುಗಿದ ತಕ್ಷಣ ಅಲ್ಲಿಗೆ ಚಿತ್ರೀಕರಣಕ್ಕೆ ಹೋದ ಕಾರಣ, ಹೆಚ್ಚಿನ ವಿದ್ಯಾರ್ಥಿಗಳಿರಲಿಲ್ಲ. ಸಂಜೆ 7 ಗಂಟೆ ಮೇಲೆ ಅಲ್ಲಿ ಒಬ್ಬೊಬ್ಬರೇ ಓಡಾಡೋಕೆ ಭಯವಾಗುತ್ತಿತ್ತು. ಹಿಂದೆ ಯಾರೋ ಇದಾರೇನೋ ಅಂತೆಲ್ಲ ಅನ್ನಿಸುತ್ತಿತ್ತು’ ಎಂದು ಹೇಳಿಕೊಳ್ಳುತ್ತಾರೆ ಖುಷಿ. ಸದ್ಯ ಅವರು ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ.

‘ಇದೇ ತಿಂಗಳ 15ರಿಂದ ಒಂದೊಂದೇ ಚಿತ್ರದ ಮುಹೂರ್ತ ನಡೆಯಲಿದೆ. ಗರ್ಲ್ ನೆಕ್ಸ್್ಟ ಡೋರ್ ಪಾತ್ರಗಳಿಗೆ ಸೀಮಿತವಾಗುವ ಬದಲು, ಬೇರೆ ಬೇರೆ ರೀತಿಯ ರೋಲ್​ಗಳಲ್ಲಿ ನಟಿಸಬೇಕು, ಆ ಮೂಲಕ ಖುಷಿ ಎಲ್ಲ ಎಲ್ಲ ಬಗೆಯ ಪಾತ್ರಗಳಲ್ಲೂ ಮಾಡುತ್ತಾರೆ ಅಂತ ಜನರಿಗೆ ಗೊತ್ತಾಗಬೇಕು. ಹೀಗಾಗಿ ಎಚ್ಚರಿಕೆಯಿಂದ ಸಿನಿಮಾ, ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಖುಷಿ ರವಿ.