ಬೆಂಗಳೂರು: ಹೊಂಬಾಳೆ ಫಿಲಂಸ್ನ ನಿರ್ಮಾಣದಲ್ಲಿ ಮೂಡಿಬಂದ 'ಧೂಮಂ' ಚಿತ್ರ ಜೂನ್ 23, 2023 ರಲ್ಲಿ ಬಿಡುಗಡೆಗೊಂಡು, ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಹೊಸ ಮಾಹಿತಿಯೊಂದು ಲಭಿಸಿದೆ.
ಅಲ್ಲು ಅರ್ಜುನ್ ನಟನೆಯ 'ಪುಷ್ಪ 1' ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ ನಟ ಫಹದ್ ಫಾಸಿಲ್ ಮತ್ತು ಪ್ರತಿಭಾವಂತ ನಟಿ ಅಪರ್ಣಾ ಬಾಲಮುರಳಿ ಅಭಿನಯದ 'ಧೂಮಂ' ಚಿತ್ರ ಈ ಹಿಂದೆಯೇ ನಿಗಡಿಪಡಿಸಿದ್ದಂತೆ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾಗಬೇಕಿತ್ತು. ಆದ್ರೆ, ಸಿನಿಮಾ ನಿರೀಕ್ಷಿಸಿದಂತೆ ಪ್ರೇಕ್ಷಕರಿಗೆ ಸ್ಟ್ರೀಮಿಂಗ್ಗೆ ಲಭ್ಯವಾಗಲಿಲ್ಲ. ಇದೀಗ ಚಿತ್ರ ಶೀಘ್ರವೇ ರಿಲೀಸ್ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಲೂಸಿಯಾ ಮತ್ತು ಯು-ಟರ್ನ್ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ನಿರ್ದೇಶನದಲ್ಲಿ ಬಿಡುಗಡೆಗೊಂಡ ಈ ಚಿತ್ರದ ಒಟಿಟಿ ರಿಲೀಸ್ಗೆ ಸದ್ಯ ಫಹದ್ ಫಾಸಿಲ್ ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಚಿತ್ರದಲ್ಲಿ ರೋಷನ್ ಮ್ಯಾಥ್ಯೂ, ಅಚ್ಯುತ್ ಕುಮಾರ್, ವಿನೀತ್, ದೇವ್ ಮೋಹನ್, ಅನು ಮೋಹನ್ ಸೇರಿದಂತೆ ಮುಂತಾದವರ ತಾರಗಣವಿದೆ,(ಏಜೆನ್ಸೀಸ್).