ಬೆಂಗಳೂರು: ಬಜಾರ್ ಖ್ಯಾತಿಯ ಧನ್ವೀರ್ ನಾಯಕರಾಗಿ ನಟಿಸಿರುವ ಕೈವ ಚಿತ್ರದ ಆಕ್ಷನ್ ಟೀಸರ್ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಅಭಿಷೇಕ್ ಅಂಬರೀಶ್, ನಿರ್ದೇಶಕರಾದ ದಿನಕರ್ ತೂಗುದೀಪ, ಮಹೇಶ್ ಕುಮಾರ್ ಈ ಚಿತ್ರದ ಆಕ್ಷನ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಆ್ಯಕ್ಷನ್ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ನಿರ್ದೇಶಕ ಜಯತೀರ್ಥ, ಕೈವ ಇದು ಒಬ್ಬ ವ್ಯಕ್ತಿಯ ಹೆಸರು. 1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ನನಗೆ ಮಾರ್ಚರಿಯಲ್ಲಿ ಕೆಲಸ ಮಾಡುವವರಿಂದ ಈ ಕಥೆ ಸಿಕ್ಕಿತು. ಆನಂತರ ತಿಗಳರಪೇಟೆಗೆ ಹೋಗಿ ಅಲ್ಲಿ ಈ ಘಟನೆ ಬಗ್ಗೆ ಕೂಲಂಕುಶವಾಗಿ ತಿಳಿದುಕೊಂಡೆ. ಈ ಘಟನೆ ಕಂಡಿದ್ದ ಅನೇಕರು ಈಗಲೂ ಇದ್ದಾರೆ. ಇದೇ ಇಸವಿಯಲ್ಲಿ ನಡೆದ ಗಂಗಾರಾಮ್ ಕಟ್ಟಡದ ದುರಂತಕ್ಕು ಹಾಗೂ ಈ ಚಿತ್ರದ ಕಥೆಗೂ ಸಂಬಂಧವಿದೆ.
ಚಿತ್ರದ ನಾಯಕನಾಗಿ ಧನ್ವೀರ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಮೇಘ ಶೆಟ್ಟಿ ನಟಿಸಿದ್ದಾರೆ. ದಿನಕರ್ ತೂಗುದೀಪ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ವೇತಪ್ರಿಯ ಛಾಯಾಗ್ರಹಣ ಮಾಡಿದ್ದಾರೆ. ಮೈಸೂರಿನಲ್ಲಿ ನಲವತ್ತೆಂಟು ದಿನಗಳ ಚಿತ್ರೀಕರಣ ನಡೆದಿದೆ. ಕೆಲವು ಭಾಗಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆ. ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ.
ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯ ವೈರಲ್ ವಿಡಿಯೋ; ಸರ್ಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ ಎಂದ ಮಾಜಿ ಸಿಎಂ ಎಚ್ಡಿಕೆ
ನಾಯಕನಟ ಧನ್ಕೈವೀರವ, ನಾನು ನಾಯಕನಾಗಿ ನಟಿಸಿರುವ ನಾಲ್ಕನೇ ಚಿತ್ರ, ಈ ಕಥೆ ಎಲ್ಲ ಕಡೆ ಸುತ್ತಿ ದ್ರೌಪದಿ ತಾಯಿ ಆಶೀರ್ವಾದದಿಂದ ನನ್ನ ಬಳಿ ಬಂತು. ಜಯತೀರ್ಥ ಅವರು ತುಂಬಾ ಅದ್ಛುತವಾಗಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದವರು ಚಿತ್ರ ಚೆನ್ನಾಗಿದೆ ಎನ್ನುತ್ತಿದ್ದಾರೆ. ನಿಮ್ಮ ಪ್ರೋತ್ಸಾಹವಿರಲಿ ಎಂದು ಮನವಿ ಮಾಡಿದ್ದಾರೆ.
ನಟ, ನಿರ್ದೇಶಕ ದಿನಕರ್ ತೂಗುದೀಪ್ ರವರು ಮಾತನಾಡಿ, ನನಗೆ ಸಂಭಾಷಣೆಕಾರ ರಘು ನಿಡವಳ್ಳಿ, ನಿರ್ದೇಶಕ ಜಯತೀರ್ಥ ಅವರು ಭೇಟಿಯಾಗಬೇಕಂತೆ ಅಂದರು. ಆಗ ಜಯತೀರ್ಥ ಅವರು ಈ ಪಾತ್ರದ ಬಗ್ಗೆ ಹೇಳಿದರು. ನನ್ನ ಪಾತ್ರ ನೋಡಿದವರು ನಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರ ಹಾಗೆ ಕಾಣುತ್ತೀರಾ ಎನ್ನುತ್ತಿದ್ದಾರೆ. ಅದು ನಮ್ಮ ತಂದೆಯವರ ಆಶೀರ್ವಾದ. ನಮ್ಮ ಅಮ್ಮ ಕೂಡ ನನ್ನ ಪಾತ್ರ ನೋಡಿ ಸಂತೋಷಪಟ್ಟರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಾಯಕಿ ಮೇಘ ಶೆಟ್ಟಿ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ರಾಘು ಶಿವಮೊಗ್ಗ, ಸಂಭಾಷಣೆಕಾರ ರಘು ನಿಡವಳ್ಳಿ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ಅವರು "ಕೈವ" ಚಿತ್ರದ ಕುರಿತು ಮಾಹಿತಿ ನೀಡಿದರು.