ನ್ಯೂಸ್

ವಿಮಾನಗಳ ಕಿಟಕಿಯಲ್ಲಿ ವಿಡಿಯೋ, ಫೋಟೋ ತೆಗೆಯದಂತೆ DGCA ಆದೇಶ

DGCA: ದೇಶದ ಪಶ್ಚಿಮ ಗಡಿಯಲ್ಲಿರುವ ಏರ್‌ಪೋರ್ಟ್‌ಗಳಲ್ಲಿ ವಿಮಾನದ ಕಿಟಕಿ ಮುಚ್ಚಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಮಹತ್ವದ ಆದೇಶ ನೀಡಿದೆ.

ಆಪರೇಷನ್ ಸಿಂಧೂರ ನಂತರ ದೇಶದಲ್ಲಿರುವ ಗೂಢಚಾರರ ತೀವ್ರ ನಿಗಾ ಇಡಲಾಗಿದೆ. ಜೊತೆಗೆ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡಿದ ಆರೋಪದ ಮೇಲೆ ಕೆಲವರನ್ನ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದೀಗ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಎಲ್ಲಾ ವಾಣಿಜ್ಯ ಏರ್‌ಲೈನ್ಸ್‌ಗಳಿಗೆ ಮಹತ್ವದ ಆದೇಶವನ್ನು ಹೊರಡಿಸಿದೆ.

ಡಿಫೆನ್ಸ್ ವಿಮಾನ ನಿಲ್ದಾಣಗಳಲ್ಲಿ ವಿಮಾನ ಲ್ಯಾಂಡಿಂಗ್, ಟೇಕಾಫ್ ವೇಳೆ ವಿಮಾನಗಳ ಕಿಟಕಿ ಮುಚ್ಚಲು ಎಲ್ಲಾ ಏರ್‌ಲೈನ್ಸ್‌ಗಳಿಗೆ DGCA ಆದೇಶಿಸಿದೆ.

ವಿಮಾನವು ಟೇಕ್ ಆಫ್ ಆದ ನಂತರ 10 ಸಾವಿರ ಅಡಿ ಎತ್ತರಕ್ಕೆ ಏರುವವರೆಗೆ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಅದೇ ಎತ್ತರಕ್ಕೆ ಇಳಿದ ನಂತರವೂ ಈ ನಿಯಮವನ್ನು ಪಾಲಿಸಬೇಕಾಗುತ್ತದೆ. ಆದರೆ ತುರ್ತು ನಿರ್ಗಮನದ ಸಮಯದಲ್ಲಿ ಮಾತ್ರ ಈ ನಿಯಮಕ್ಕೆ ವಿನಾಯಿತಿ ಇದೆ ಎಂದು ವಾಯುಯಾನ ನಿಯಂತ್ರಕ ಸ್ಪಷ್ಟಪಡಿಸಿದೆ.

ಏರ್ ಲೈನ್ಸ್‌ಗಳು ಪ್ರಯಾಣಿಕರಿಗೆ ಡಿಫೆನ್ಸ್ ಏರ್ ಪೋರ್ಟ್‌ಗಳಲ್ಲಿ ಫೋಟೋ, ವಿಡಿಯೋ ತೆಗೆಯದಂತೆ ಅಲರ್ಟ್ ಮಾಡಬೇಕು. ಈ ಆದೇಶದ ಬಗ್ಗೆ ಪ್ರಯಾಣಿಕರಿಗೆ ಮುಂಚಿತವಾಗಿಯೇ ತಿಳಿಸಬೇಕು. ಹೀಗಾಗಿ ಡಿಫೆನ್ಸ್ ಸ್ಥಳಗಳ ವಿವರ ಸೋರಿಕೆಯಾಗದಂತೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

"ಕಾರ್ಯಾಚರಣೆಯ ಸುರಕ್ಷತೆ"ಯನ್ನು ಹೆಚ್ಚಿಸಲು ಮತ್ತು "ಸಾರ್ವಜನಿಕರಿಂದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಉದ್ದೇಶಪೂರ್ವಕವಲ್ಲದ ರೀತಿಯಲ್ಲಿ ಹಂಚಿಕೊಳ್ಳುವುದನ್ನು" ತಡೆಯಲು ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಡಿಜಿಸಿಎ ನಿರ್ದೇಶನದಲ್ಲಿ ತಿಳಿಸಲಾಗಿದೆ.

ವಿಡಿಯೋ, ಫೋಟೋ ತೆಗೆದ ಪ್ರಯಾಣಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)