ವಡೋದರಾ: ದೆವ್ವಗಳ ಕಥೆಯನ್ನ ಸಿನಿಮಾಗಳಲ್ಲಿ ನೋಡಿರುತ್ತೀರಿ. ಹೆಚ್ಚೆಂದರೆ ಎಲ್ಲೋ ಕೆಲವರ ಬಾಯಲ್ಲೂ ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿಗೆ ದೆವ್ವಗಳು ಬರೀ ಕಾಣಿಸಿಕೊಂಡಿದ್ದಲ್ಲ, ಪೂರ್ತಿ ದೆವ್ವಗಳ ಗ್ಯಾಂಗೇ ಬಂದು ಆತನ ಮೇಲೆ ಅಟ್ಯಾಕ್ ಮಾಡಿದೆಯಂತೆ. ಈ ವಿಚಾರವಾಗಿ ಆತ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
ಗುಜರಾತ್ನ ವಡೋದರಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 35 ವರ್ಷದ ವ್ಯಕ್ತಿ ಪೊಲೀಸ್ ಠಾಣೆಗೆ ಬಂದಿದ್ದು, ನಾನು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ದೆವ್ವಗಳ ಗ್ಯಾಂಗ್ ನನ್ನ ಮೇಲೆ ಅಟ್ಯಾಕ್ ಮಾಡಿದೆ. ಅದರಲ್ಲೂ ಎರಡು ದೆವ್ವಗಳು ನನಗೆ ಕೊಲೆ ಬೆದರಿಕೆಯನ್ನೂ ಹಾಕಿವೆ ಎಂದು ಹೇಳಿದ್ದಾನೆ. ಅದನ್ನು ಕೇಳಿದ ಪೊಲೀಸರು ಒಮ್ಮೆ ಶಾಕ್ ಆಗಿದ್ದಾರೆ. ವ್ಯಕ್ತಿಯ ಮೇಲೆ ಅನುಮಾನ ಬಂದಿದೆ. ಆದರೆ ಆತ ಗಾಬರಿಯಾಗಿದ್ದನ್ನು ಕಂಡು, ದೂರು ದಾಖಲಿಸಿಕೊಂಡು, ಆತನನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಅದನ್ನು ಪರಿಶೀಲಿಸಲೆಂದು ದೂರು ನೀಡಿದ ವ್ಯಕ್ತಿಯ ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಆಗ ಅವರು, ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಕಳೆದ 10 ದಿನಗಳಿಂದ ಮಾತ್ರೆ ತೆಗೆದುಕೊಳ್ಳದ ಪರಿಣಾಮ ವಿಚಿತ್ರವಾಗಿ ವರ್ತಿಸುತ್ತಿರುವುದಾಗಿ ಹೇಳಿದ್ದಾರೆ. ಅದಾದ ಮೇಲೆ ಪೊಲೀಸರ ಸಹಾಯದೊಂದಿಗೆ ಮತ್ತೊಮ್ಮೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. (ಏಜೆನ್ಸೀಸ್)