ಮುಂಬೈ: ಮೂರು ವರ್ಷಗಳ ಹಿಂದೆ ಉದ್ಧವ್ ಠಾಕ್ರೆ ನೇತೃತ್ವದ ಮಹ ಆವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಲು ಸುಳ್ಳು ಅಫಿಡೆವಿಟ್ ಸಲ್ಲಿಸುವಂತೆ ತಮ್ಮ ಮೇಲೆ ದೇವೇಂದ್ರ ಫಡ್ನವೀಸ್ ಒತ್ತಡ ಹೇರಿದ್ದರು ಎಂದು ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಆರೋಪಿಸಿದ್ದಾರೆ. ಈ ವಿಚಾರ ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.
ಮುಂಬೈನಲ್ಲಿ ಈ ಕುರಿತು ಮಾತನಾಡಿದ ದೇಶ್‌ಮುಖ್, ಠಾಕ್ರೆ ಅವರ ವಿರುದ್ಧ ಸುಳ್ಳು ಅಫಿಡವಿಟ್‌ಗಳನ್ನು ಸಲ್ಲಿಸಿದರೆ ತಮ್ಮ ಮೇಲಿನ ಕೇಂದ್ರೀಯ ತನಿಖಾ ಸಂಸ್ಥೆಗಳ ತನಿಖೆಗೆ ತಡೆ ನೀಡುವುದಾಗಿ ಫಡ್ನವೀಸ್ ಆಫರ್ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಅನಿಲ ಪರಬ್ ಮತ್ತು ಅಜಿತ್ ಪವಾರ್ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವ ಅಫಿಡವಿಟ್ ಸಲ್ಲಿಸುವಂತೆ ದೇವೇಂದ್ರ ಫಡ್ನವೀಸ್ ನನಗೆ ಹೇಳಿದ್ದರು. ಆದರೆ ಅದಕ್ಕೆ ನಾನು ನಿರಾಕರಿಸಿದ್ದೆ. ಈ ಕಾರಣದಿಂದಲೇ ನನ್ನನ್ನು ಬಂಧಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅನ್ನು ಕಳುಹಿಸಲಾಗಿತ್ತು. ನನ್ನನ್ನು 13 ತಿಂಗಳು ಜೈಲಿನಲ್ಲಿ ಇರಿಸಲಾಗಿತ್ತು.
ಇತ್ತ ದೇಶ್‌ಮುಖ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ವಿರುದ್ಧ ಅನಿಲ್ ದೇಶ್‌ಮುಖ್ ಮಾತನಾಡಿರುವ ಅನೇಕ ವಿಡಿಯೋ ಹಾಗೂ ಆಡಿಯೋ ಕ್ಲಿಪ್‌ಗಳು ನನ್ನ ಬಳಿ ಇವೆ. ಅವರು ಮಾಡಿರುವ ಆರೋಪವೆಲ್ಲವೂ ಸತ್ಯಕ್ಕೆ ದೂರವಾದದ್ದು ಎಂದು ತಳ್ಳಿಹಾಕಿದ್ದಾರೆ.
ಅನಿಲ್ ದೇಶ್‌ಮುಖ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಆಗ ಸಿಎಂ ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ್ ವಿರುದ್ಧ ಅವರ ಹೇಳಿಕೆಗಳನ್ನು ನೀಡಿದ್ದರು. ಇದರ ಆಡಿಯೋ ವಿಡಿಯೋ ನನ್ನ ಬಳಿ ಇವೆ. ಈಗ ನೋಡಿದರೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಪುರಾವೆಗಳನ್ನು ಬಹಿರಂಗಪಡಿಸದ ಹೊರತು ನನಗೆ ಬೇರೆ ಆಯ್ಕೆ ಇಲ್ಲ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.