ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್ ನಟ ಜೂ. ಎನ್ಟಿಆರ್ ಅಭಿನಯದ ಬಹುನಿರೀಕ್ಷಿತ 'ದೇವರ' ಬಗ್ಗೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಸಿನಿಮಾ ಕುರಿತಾದ ಹೊಸ ಹೊಸ ಮಾಹಿತಿಗಾಗಿ ಕುತೂಹಲದಿಂದ ಕಾಯುತ್ತಿರುವ ನಟನ ಅಭಿಮಾನಿಗಳಿಗೆ ಇದೀಗ ಆಶ್ಚರ್ಯಕರ ಸುದ್ದಿಯೊಂದು ಹೊರಬಿದ್ದಿದೆ.
ಶಿವ ಕೊರಟಾಲ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ದೇವರ' ಬಿಡುಗಡೆಗೂ ಮುನ್ನವೇ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಮಧ್ಯೆ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಮತ್ತು ಆಡಿಯೋ ಹಕ್ಕುಗಳು ಭರ್ಜರಿ ಮೊತ್ತಕ್ಕೆ ಮಾರಾಟವಾಗುವ ಮುಖೇನ ಹೊಸ ದಾಖಲೆ ಬರೆದಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.
ಚಿತ್ರದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದ್ದು, ಸಂಗೀತ ಹಕ್ಕುಗಳನ್ನು ಟಿ-ಸೀರೀಸ್ ಪಾಲಾಗಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಈ ಕುರಿತು ಚಿತ್ರದ ನಿರ್ಮಾಪಕರು ಘೋಷಿಸಲಿರುವ ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.
ಚಿತ್ರದಲ್ಲಿ ಜೂ. ಎನ್ಟಿಆರ್ ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಏಪ್ರಿಲ್ 5, 2024 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ,(ಏಜೆನ್ಸೀಸ್).