ನ್ಯೂಸ್

ನಿಮ್ಮ ಬಳಿ ಇರುವ ಆಟಂಬಾಂಬ್ ಸ್ಪೋಟಿಸಿ: ರಾಹುಲ್​ ಗಾಂಧಿಗೆ ಸವಾಲೆಸೆದ ರಕ್ಷಣಾ ಸಚಿವ | Rajnath Singh

Rajnath Singh: ಚುನಾವಣಾ ಆಯೋಗ ಬಿಹಾರದಲ್ಲಿ ಮತ ಕಳ್ಳತನ ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸುವ ಸಾಕ್ಷಿಗಳು ನನ್ನ ಬಳಿ ಇವೆ ಎಂದು ಹೇಳಿದ್ದ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ (ಆಗಸ್ಟ್ 2) ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಹಾರದ ಪಾಟ್ನದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ರಾಹುಲ್ ಗಾಂಧಿ ತಮ್ಮ ಬಳಿ ಪರಮಾಣು ಬಾಂಬ್ ಇದೆ ಎಂದು ಹೇಳುತ್ತಾರೆ. ಪರಮಾಣು ಬಾಂಬ್ ಆನ್ನು ತಕ್ಷಣವೇ ಸ್ಫೋಟಿಸಬೇಕು. ರಾಹುಲ್ ಅಪಾಯದಿಂದ ಪಾರಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ರಾಹುಲ್​ ಗಾಂಧಿ ಸಂಸತ್ತಿಗೆ ಭೂಕಂಪದ ಬೆದರಿಕೆ ಹಾಕಿದ್ದರು, ಆದರೆ ಅವರು ಮಾತನಾಡಿದಾಗ ಮಾತುಗಳು ಹಾಸ್ಯಾಸ್ಪದವಾಗಿ ಪರಿಣಮಿಸಿದವು ಎಂದು ರಾಜ್​ನಾಥ್ ಸಿಂಗ್​ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಚುನಾವಣಾ ಆಯೋಗವು ದೇಶದಲ್ಲಿ ಪ್ರಶ್ನಾತೀತ ಸಮಗ್ರತೆಯ ಖ್ಯಾತಿಯನ್ನು ಹೊಂದಿರುವ ಸಂಸ್ಥೆಯಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಮುಕ್ತವಾಗಿ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಸಾಂವಿಧಾನಿಕ ಸಂಸ್ಥೆಯ ಬಗ್ಗೆ ಕ್ಷುಲ್ಲಕ ಹೇಳಿಕೆಗಳನ್ನು ನೀಡುವುದು ವಿರೋಧ ಪಕ್ಷದ ನಾಯಕನಿಗೆ ಸಲ್ಲದು ಎಂದು ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್​ ಹೇಳಿದ್ದೇನು..?

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಮತಕಳ್ಳತನಕ್ಕೆ ಚುನಾವಣಾ ಆಯೋಗ ನೆರವಾಗಿದೆ ಎಂದು ವಿಪಕ್ಷ ನಾಯಕ ರಾಹುಲ್​ ಗಾಂಧಿ ಆರೋಪಿಸಿದ್ದರು. ಈ ಆರೋಪವನ್ನು ಸಾಬೀತು ಪಡಿಸುಲು ತಮ್ಮ ಬಳಿ ಆಟಂಬಾಂಬ್​ ಇದೆ ಎಂದು ಹೇಳಿದ್ದರು.

ಈ ಕುರಿತು ಕಾಂಗ್ರೆಸ್​ ಸಂಗ್ರಹಿಸಿದ ದಾಖಲೆ ಮತ್ತು ಪುರಾವೆಗಳನ್ನು ರಾಹುಲ್​ ಆಟಂಬಾಂಬ್​ಗೆ ಹೋಲಿಕೆ ಮಾಡಿದ್ದರು. ನನ್ನ ಬಳಿ ಇರುವ ಆಟಂಬಾಂಬ್​ ಸ್ಪೋಟಿಸಿದಾಗ ಚುನಾವಣಾ ಆಯೋಗದವರು ತಪ್ಪಿಸಿಕೊಳ್ಳಲು ದೇಶದಲ್ಲಿ ಜಾಗವಿರುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.