ನವದೆಹಲಿ: ಈಗಾಗಲೆ ಬಹಿರಂಗವಾಗಿರುವಂತೆ ಮುಂಬೈ ಮೂಲದ ಗ್ಲೆನ್ಮಾರ್ಕ್ ಫಾರ್ಮಸ್ಯುಟಿಕಲ್ಸ್ ಕಂಪನಿಯು ಕೋವಿಡ್ ಔಷಧ ಫಾವಿಪಿರಾವಿರ್ ಔಷಧವನ್ನು ಫ್ಯಾಬಿಫ್ಲೂ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದಕ್ಕಾಗಿ ಅದು ಭಾರತೀಯ ಔಷಧ ಪ್ರಧಾನ ನಿಯಂತ್ರಕರಿಂದ (ಡಿಸಿಜಿಐ) ಅನುಮತಿಯನ್ನೂ ಪಡೆದುಕೊಂಡಿದೆ. ಆರಂಭಿಕ ಹಂತದಿಂದ ತೀವ್ರ ಗಂಭೀರವಲ್ಲದ ಹಂತದ ಕರೊನಾ ಸೋಂಕಿತರ ಚಿಕಿತ್ಸೆಗೆ ಬಳಸಬಹುದಾದ ಫ್ಯಾಬಿಫ್ಲೂ ಮಾತ್ರೆ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಬಿಡುಗಡೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಫ್ಲಾಬಿಫ್ಲೂ ಬಗೆಗಿನ ಮಾಹಿತಿಯನ್ನು ಇಲ್ಲಿ ಕೊಡಲಾಗುತ್ತಿದೆ.
ಫ್ಯಾಬಿಫ್ಲೂ ಮಾತ್ರೆ ತಲಾ 200 ಎಂಜಿಯ 34 ಮಾತ್ರೆಗಳ ಒಂದು ಬಾಕ್ಸ್ನಲ್ಲಿ ಲಭ್ಯವಾಗಲಿದೆ. ಇದರ ದರ 3,500 ರೂ. ಆಗಿದೆ. ಅಂದರೆ ಒಂದು ಮಾತ್ರೆಗೆ 103 ರೂ. ಆಗಲಿದೆ. ಆರಂಭಿಕ ಹಂತದ ಸೋಂಕಿತರಿಗೆ ಮೊದಲ ದಿನ ದಿನಕ್ಕೆ ಎರಡು ಬಾರಿಯಂತೆ 9 ಮಾತ್ರೆಗಳನ್ನು (1800 ಎಂಜಿ) ಕೊಡಬೇಕಾಗುತ್ತದೆ. 14ನೇ ದಿನದ ಚಿಕಿತ್ಸೆಯಲ್ಲಿ ದಿನಕ್ಕೆ ಎರಡು ಬಾರಿಯಂತೆ 4 ಮಾತ್ರೆಗಳು (800 ಎಂಜಿ) ಕೊಡಬೇಕಾಗುತ್ತದೆ.
ಭಾರತದ 11 ಸ್ಥಳಗಳಲ್ಲಿ 90 ಆರಂಭಿಕ ಮತ್ತು ತೀವ್ರ ಗಂಭೀರವಲ್ಲದ ಕರೊನಾ ಸೋಂಕಿತರಿಗೆ ಈ ಮಾತ್ರೆಗಳನ್ನು ಕೊಟ್ಟು ಪರೀಕ್ಷಿಸಲಾಗಿದೆ. ಇವರಲ್ಲಿ ಶೇ.80 ಸೋಂಕಿತರು ತುಂಬಾ ಬೇಗನೆ ಚೇತರಿಸಿಕೊಂಡಿದ್ದಾಗಿ ಹೇಳಲಾಗಿದೆ.
ಬೆಂಗಳೂರು ಮೂಲದ ಸ್ಟ್ರೈಡ್ಸ್ ಫಾರ್ಮ, ಹೈದರಾಬಾದ್ ಮೂಲದ ಆಪ್ಟಿಮಸ್ ಫಾರ್ಮ, ಮುಂಬೈ ಮೂಲದ ಲಾಸಾ ಸೂಪರ್ಜೆರ್ನಿಕ್ಸ್ ಮತ್ತು ದೆಹಲಿ ಮೂಲದ ಬ್ರಿಂಟನ್ ಫಾರ್ಮಸ್ಯೂಟಿಕಲ್ಸ್ ಕಂಪನಿಗಳು ಕೂಡ ಇದೀಗ ಫ್ಲಾಬಿಫ್ಲೂ ಮಾತ್ರೆಗಳನ್ನು ತಮ್ಮದೇ ಬ್ರ್ಯಾಂಡ್ ನೇಮ್ಗಳಲ್ಲಿ ಬಿಡುಗಡೆ ಮಾಡಲು ಡಿಸಿಜಿಐಗೆ ಅನುಮತಿ ಕೋರಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಫಾವಿಪಿರಾವಿರ್ ಔಷಧ ಭಾರತದ ಮಾರುಕಟ್ಟೆಯಲ್ಲಿ ಯಥೇಚ್ಚವಾಗಿ ಸಿಗುವುದು ನಿಶ್ಚಿತವಾಗಿದೆ.