ನ್ಯೂಸ್

ರಷ್ಯಾ ಸಮರ ಜಹಜು ಧ್ವಂಸ; ದಾಳಿ ಹೊಣೆ ಹೊತ್ತ ಯೂಕ್ರೇನ್, ಗಂಭೀರ ಹಾನಿ ಎಂದ ಕ್ರೆಮ್ಲಿನ್

ಮಾಸ್ಕೊ/ಕಿಯೆವ್: ಯೂಕ್ರೇನ್-ರಷ್ಯಾ ಬಿಕ್ಕಟ್ಟು ತೀವ್ರ ಗೊಂಡಿದ್ದು, ಸಮರ ಏಳನೇ ವಾರಕ್ಕೆ ಕಾಲಿರಿಸಿದೆ. ಯೂಕ್ರೇನ್ ಮೇಲೆ ದಾಳಿ ನಡೆಸುವುದಕ್ಕೆ ಬಳಸಲಾಗುತ್ತಿದ್ದ ರಷ್ಯಾದ ಪ್ರಮುಖ ಸಮರ ನೌಕೆ ಮೋಸ್ಕವ ಮಿಸೈಲ್ ಕ್ರೂಸರ್ ಗಂಭೀರ ಹಾನಿಗೆ ಒಳಗಾಗಿದೆ ಎಂದು ಕ್ರೆಮ್ಲಿನ್ ಹೇಳಿದೆ. ಆದರೆ, ಇದು ದಾಳಿಯಿಂದ ಆಗಿದ್ದಲ್ಲ, ನೌಕೆ ಯಲ್ಲಿನ ಸ್ಫೋಟ ಸಂಭವಿಸಿ ದ್ದರಿಂದ ಆಗಿದ್ದು ಎಂದಿದೆ. ಈ ಹಡಗಿನಲ್ಲಿ 500 ಯೋಧರಿದ್ದರು, ಎಲ್ಲರನ್ನೂ ಸುರಕ್ಷಿತ ವಾಗಿ ಸ್ಥಳಾಂತರಿಸಲಾಗಿದೆ. ಹಡಗಿನಲ್ಲಿ 16 ಕ್ಷಿಪಣಿಗಳಿದ್ದವು. ಹಾನಿಗೀಡಾದ ಹಡಗನ್ನು ಬಂದರಿಗೆ ಎಳೆದೊಯ್ಯುವ ಕೆಲಸ ಪ್ರಗತಿಯಲ್ಲಿದೆ ಎಂದು ರಷ್ಯಾ ಸೇನಾ ಮೂಲಗಳು ತಿಳಿಸಿವೆ. ಇದೇ ವೇಳೆ, ಕಪು್ಪ ಸಮುದ್ರದಲ್ಲಿದ್ದ ರಷ್ಯಾದ ಪ್ರಮುಖ ಸಮರ ನೌಕೆಯ ಮೇಲೆ ದಾಳಿ ನಡೆಸಿ ನಾಶ ಮಾಡಿರುವುದಾಗಿ ಯೂಕ್ರೇನ್ ಸೇನೆ ಹೇಳಿದೆ.

ಯೂಕ್ರೇನ್ ಸೋಲಲು ಬಿಡುವುದಿಲ್ಲ: ಯೂಕ್ರೇನ್​ಗೆ ನಿಯತವಾಗಿ ಯುದ್ಧೋಪಕರಣಗಳನ್ನು ಒದಗಿಸು ತ್ತೇವೆ. ಯೂಕ್ರೇನ್ ಅನ್ನು ವಶಪಡಿಸಿಕೊಳ್ಳುವ ರಷ್ಯಾ ಉದ್ದೇಶ ಈಡೇರಲು ಬಿಡುವುದಿಲ್ಲ. ಯೂಕ್ರೇನ್ ಸೇನೆಗೆ ಅಗತ್ಯ ಸೇನಾ ನೆರವನ್ನು ನೀಡುತ್ತ, ಪುತಿನ್ ಸರ್ಕಾರ ಸೋಲುವಂತೆ ಮಾಡುತ್ತೇವೆ. ಅಲ್ಲಿಯ ತನಕ ವಿಶ್ರಮಿಸುವುದಿಲ್ಲ ಎಂದು ಅಮೆರಿಕದ ಬೈಡೆನ್ ಸರ್ಕಾರ ಹೇಳಿದೆ.

ಅಮೆರಿಕದಿಂದ ಮತ್ತೆ ಸೇನಾ ನೆರವು: ಯೂಕ್ರೇನ್ ಸರ್ಕಾರಕ್ಕೆ ಅಮೆರಿಕ ಮತ್ತೆ ಸೇನಾ ನೆರವು ಘೋಷಿಸಿದ್ದು, ಹೊಸದಾಗಿ 800 ದಶಲಕ್ಷ ಡಾಲರ್ ಮೌಲ್ಯದ ಪ್ಯಾಕೇಜ್ ಪ್ರಸ್ತಾವನೆಗೆ ಅನುಮತಿ ನೀಡಿದೆ. ಇದರಲ್ಲಿ ಹೆಚ್ಚುವರಿ ಹೆಲಿಕಾಪ್ಟರ್​ಗಳು ಮತ್ತು ಮೊಟ್ಟ ಮೊದಲ ಅಮೆರಿಕನ್ ಆರ್ಟಿಲರಿ ಕೂಡ ಸೇರಿಕೊಂಡಿದೆ. ಇದಲ್ಲದೆ, ಪರ್ಸೆನೆಲ್ ಕ್ಯಾರಿಯರ್ಸ್, ನಾವಲ್ ಡ್ರೋನ್ ವೆಸ್ಸೆಲ್ಸ್ ಮತ್ತು ಇತರೆ ಯುದ್ಧೋಪಕರಣ ಒದಗಿಸಲಿದೆ ಎಂದು ಅಧ್ಯಕ್ಷ ಬೈಡೆನ್ ಘೋಷಿಸಿದ್ದಾರೆ.

ಬುಚಾದಲ್ಲಿ ಇನ್ನಷ್ಟು ಹತ್ಯಾಕಾಂಡ: ಕಿಯೆವ್ ಸಮೀಪದ ಬುಚಾದಲ್ಲಿ ಇನ್ನಷ್ಟು ನರಮೇಧ ಆಗಿರುವುದು ಬೆಳಕಿಗೆ ಬಂದಿದೆ. ಮತ್ತೆ 400 ಜನರ ಮೃತದೇಹಗಳು ಪತ್ತೆಯಾಗಿವೆ. 25ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಹೇಗ್ ಮೂಲದ ಇಂಟರ್ ನ್ಯಾಷನಲ್ ಕ್ರಿಮಿನಲ್ ಕೋರ್ಟ್ ಪ್ರತಿನಿಧಿಗಳು ಬುಚಾಗೆ ಭೇಟಿ ನೀಡಿದ್ದು, ಸ್ಥಳಪರೀಲನೆ ಮಾಡುತ್ತಿದ್ದಾರೆ. ಅಲ್ಲಿ ಅವರಿಗೆ ಇನ್ನಷ್ಟು ಸಾಕ್ಷ್ಯಗಳು ಸಿಗುತ್ತಿವೆ ಎಂದು ಮೂಲಗಳು ತಿಳಿಸಿವೆ.

ನೆರೆರಾಷ್ಟ್ರಗಳ ಅಧ್ಯಕ್ಷರ ತಂಡ: ರಷ್ಯಾದ ಸುತ್ತಮುತ್ತಲಿನ ರಾಷ್ಟ್ರಗಳ ಅಧ್ಯಕ್ಷರ ತಂಡ ಸಮರಪೀಡಿತ ಯೂಕ್ರೇನ್​ಗೆ ಭೇಟಿ ನೀಡಿ ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಿದ್ದಾರೆ. ಪೋಲೆಂಡ್, ಲಿಥುವಾನಿಯ, ಲಾತ್ವಿಯಾ, ಎಸ್ಟೋನಿಯಾ ದೇಶಗಳ ಅಧ್ಯಕ್ಷರು ಈ ಒಗ್ಗಟ್ಟು ಪ್ರದರ್ಶಿಸಿದ್ದು, ನ್ಯಾಟೋ ಮಿತ್ರ ಪಡೆಗಳ ವಿಶ್ವಾಸವನ್ನು ಹೆಚ್ಚಿಸಿದ್ದಾರೆ. ಈ ಮೂರು ರಾಷ್ಟ್ರಗಳು ಹಿಂದೆ ಯೂಕ್ರೇನ್​ನಂತೆಯೇ ಸೋವಿಯತ್ ರಷ್ಯಾದ ಭಾಗಗಳಾಗಿದ್ದವು. ಈ ಮೂವರು ಅಧ್ಯಕ್ಷರು ರೈಲಿನಲ್ಲಿ ಕಿಯೆವ್​ಗೆ ತೆರಳಿ ಅಲ್ಲಿ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.