ನ್ಯೂಸ್

ಬಿ ಖಾತೆದಾರರಿಗೆ ಢವಢವ! ತೆರಿಗೆ ಕಟ್ಟುತ್ತಿದ್ದರೂ ತಪ್ಪದ ಆತಂಕ | ಈಡೇರದ ಎ ಖಾತಾ ಭರವಸೆ

ಮೋಹನ್​ ಶೆಟ್ಟಿ

| ಆರ್. ತುಳಸಿಕುಮಾರ್, ಬೆಂಗಳೂರು

ರಾಜಧಾನಿಯಲ್ಲಿರುವ ಅನಧಿಕೃತ ಕಟ್ಟಡಗಳನ್ನು ನೆಲಸಮ ಮಾಡುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಿಸಿದ ಬೆನ್ನಲ್ಲೇ ‘ಬಿ’ ಖಾತಾ ದಾಖಲೆಗಳನ್ನಷ್ಟೇ ಹೊಂದಿರುವ ಲಕ್ಷಾಂತರ ಜನರು ಆತಂಕಕ್ಕೀಡಾಗಿದ್ದಾರೆ. ಸ್ವತ್ತಿನ ಸಾಚಾತನ ಹೊಂದಿರುವ ‘ಎ’ ಖಾತಾ ದಾಖಲೆಗಳನ್ನು ಪಡೆಯಲು ದಶಕಗಳಿಂದ ಚಾತಕಪಕ್ಷಿಯಂತೆ ಕಾಯುತ್ತಿರುವ ಲಕ್ಷಾಂತರ ಸ್ವತ್ತುದಾರರಿಗೆ ಸೂರು ಕೈತಪ್ಪಿ ಹೋಗುವ ಭಯ ಕಾಡಲಾರಂಭಿಸಿದೆ. ಸರ್ಕಾರದ ಈ ನಡೆಯಿಂದ ಕಂಗಾಲಾಗಿರುವ ಜನತೆ ಈ ಸಮಸ್ಯೆಯನ್ನು ಅಧಿಕಾರದಲ್ಲಿರುವವರೇ ಪರಿಹರಿಸಬೇಕೆಂಬ ಒಕ್ಕೊರಲ ಆಗ್ರಹ ಮುಂದಿಟ್ಟಿದ್ದಾರೆ.

ಪರಿಹಾರಕ್ಕೆ ತಿಣುಕಾಟ

ಆಧುನಿಕ ಬೆಂಗಳೂರು ಯೋಜನಾಬದ್ಧವಾಗಿ ನಿರ್ವಣವಾಗಿಲ್ಲ. ಮೂಲಸೌಕರ್ಯ ಕಲ್ಪಿಸುವಲ್ಲಿ ಶಿಸ್ತು ಕಾಪಾಡಿಕೊಳ್ಳದ ಕಾರಣ ನಗರ ಅಡ್ಡಾದಿಡ್ಡಿಯಾಗಿ ಬೆಳವಣಿಗೆಯಾಗಿದೆ. ವಸತಿ ಹಾಗೂ ವಸತಿಯೇತರ ಪ್ರದೇಶಗಳಿಗೆ ಸ್ಪಷ್ಟ ಚೌಕಟ್ಟು ಹಾಕದ ಕಾರಣ ಸಿಕ್ಕಸಿಕ್ಕ ಕಡೆಗಳಲ್ಲಿ ಬಡಾವಣೆ ನಿರ್ವಿುಸಲಾಗಿದೆ. ಇಲ್ಲೂ ನಿಯಮ ಪಾಲಿಸದೆ ಅನಧಿಕೃತವಾಗಿ ಮನೆ ನಿರ್ವಿುಸಿ ಜನರು ವಾಸ್ತವ್ಯ ಹೂಡಿದ್ದಾರೆ. ಈ ತಪ್ಪನ್ನು ಅಂದೇ ಸರಿಪಡಿಸಲು ಆಡಳಿತ ನಡೆಸುವವರು ಕಡಿವಾಣ ಹಾಕದ ಕಾರಣ ಸಮಸ್ಯೆ ಬೃಹದಾಕಾರವಾಗಿ ಬೆಳೆದುನಿಂತಿದೆ. ಈಗ ಇದೇ ಸಮಸ್ಯೆ ಕುತ್ತಿಗೆಗೆ ಬಂದಿದ್ದು, ಪರಿಹಾರ ಸೂತ್ರ ಹುಡುಕಲು ಸರ್ಕಾರ ತಿಣುಕಾಡುವಂತಾಗಿದೆ. ಕಾಯ್ದೆ, ಕಾನೂನು ಹಾಗೂ ನಿಯಮಾವಳಿಗೆ ತಿದ್ದುಪಡಿ ತರುವ ಪ್ರಯತ್ನವೂ ಸಫಲವಾಗಿಲ್ಲ. ಇದು ಲಕ್ಷಾಂತರ ಜನರ ಬದುಕಿನ ಪ್ರಶ್ನೆಯಾಗಿರುವುದರಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಸರ್ಕಾರವೇ ಒಂದು ಚೌಕಟ್ಟು ರೂಪಿಸಿ ಕಾನೂನು ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿದೆ.

ಕೆಡವುವುದು ಸುಲಭವೇ?

2023ರಲ್ಲಿ ಬಿಬಿಎಂಪಿಯ ಆಗಿನ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಮಾಹಿತಿ ಸಂಗ್ರಹಿಸಿದ್ದರು. ಎಲ್ಲ ಎಂಟೂ ವಲಯಗಳಲ್ಲಿ ‘ಎ’ ಖಾತಾ ನೀಡಲು 45,133 ಪ್ರಕರಣಗಳಲ್ಲಿ ‘ಆರ್’ ಕೋಡ್ 130 ಬಳಸಿಕೊಂಡು 898.70 ಕೋಟಿ ರೂ. ಹಣ ಪಾವತಿಸಿಕೊಂಡಿರುವುದನ್ನು ಮರುಪರಿಶೀಲಿಸಲು ವರದಿ ನೀಡಿದ್ದರು. ಆದರೆ, 2.5 ಲಕ್ಷಕ್ಕೂ ಹೆಚ್ಚಿನ ಸ್ವತ್ತುಗಳಲ್ಲಿ ಪ್ರಮಾದ ಆಗಿರುವ ಮಾಹಿತಿ ಸಿಕ್ಕಿತ್ತು. ಇದರ ಹೊರತಾಗಿಯೂ ನಗರದಲ್ಲಿ 22 ಲಕ್ಷ ಸ್ವತ್ತುಗಳ ಪೈಕಿ ಅರ್ಧಕ್ಕೂ ಹೆಚ್ಚಿನವುಗಳಿಗೆ ‘ಎ’ ಖಾತಾ ಇಲ್ಲ ಎಂದು ಅಧಿಕಾರಿಗಳೇ ಹೇಳುತ್ತಿ ದ್ದಾರೆ. ಅಂದರೆ, ನಿಯಮ ಉಲ್ಲಂಘಿಸಿರುವ ಇಷ್ಟೂ ಸ್ವತ್ತುಗಳನ್ನು ಕಾನೂನು ಪರಿಧಿಯಲ್ಲಿ ನೋಡುವುದಾದರೆ ನೆಲಕ್ಕುರುಳಿಸುವ ಕೆಲಸ ಕಾರ್ಯಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಸರ್ಕಾರ ಎಡವಿದ್ದೆಲ್ಲಿ?

  • 2006ರಲ್ಲಿ ಮಹಾನಗರ ಪಾಲಿಕೆಗೆ ಹೊಸ ರೂಪ
  • ಹೊಸ ಪ್ರದೇಶಗಳನ್ನು ಸೇರಿಸಿ ಬಿಬಿಎಂಪಿ ಅಸ್ತಿತ್ವ
  • 2008ರಲ್ಲಿ ಅಧಿಕೃತವಾಗಿ ಬಿಬಿಎಂಪಿ ರಚನೆ
  • ಆ ವೇಳೆ ಹೊಸ ಪ್ರದೇಶಗಳಲ್ಲಿ ನಿಯಮ ಉಲ್ಲಂಘನೆ
  • ನಿಯಮಾವಳಿಗಳನ್ನು ಮೀರಿ ಕಟ್ಟಡಗಳ ನಿರ್ಮಾಣ
  • ಈ ಕಟ್ಟಡಗಳಿಗೆ ಕಾನೂನು ಚೌಕಟ್ಟಿನಡಿ ಸಿಗದ ಪರಿಹಾರ
  • ಕಟ್ಟಡಗಳನ್ನು ಅಧಿಕೃತಗೊಳಿಸುವ ಕೆಲಸವೇ ಆಗಲಿಲ್ಲ
  • ನಂತರದ ಸರ್ಕಾರಗಳು ಪರಿಹಾರ ಕಂಡುಕೊಳ್ಳಲಿಲ್ಲ
  • ಸೌಕರ್ಯ ಕಲ್ಪಿಸಿ ತೆರಿಗೆ ಸ್ವೀಕರಿಸಿ ಮೌನಕ್ಕೆ ಶರಣು
  • ಇಂತಹ ಸ್ವತ್ತುಗಳಿಗೆ ‘ಬಿ’ ಖಾತಾ ನಾಮಾಂಕಿತ
  • ಸಕ್ರಮಕ್ಕೆ ಕಸರತ್ತು ನಡೆಸಿದರೂ ಪ್ರಯೋಜನವಿಲ್ಲ
  • ಕಾನೂನು ವ್ಯಾಪ್ತಿಯಲ್ಲಿ ಅನುಮೋದನೆ ಸಿಗಲಿಲ್ಲ
  • ಹೀಗಾಗಿ ಮರೀಚಿಕೆಯಾದ ಎ ಖಾತೆ ದಾಖಲೆಪತ್ರ
ಮಹಾನಗರದಲ್ಲಿ ‘ಬಿ’ ಖಾತಾ ಹೊಂದಿರುವ ಸ್ವತ್ತುಗಳ ಸಂಖ್ಯೆಯೇ ಹೆಚ್ಚಿವೆ. ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ಕಂಡುಕೊಳ್ಳದ ಕಾರಣ ನಾಗರಿಕರು ಹಾಗೂ ಅಧಿಕಾರಿಗಳು ವಾಮಮಾರ್ಗ ಅನುಸರಿಸಿ ‘ಎ’ ಖಾತಾ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ತಡೆ ಹಾಕಿ ಸಕ್ರಮ ಮಾಡಿಕೊಳ್ಳುವಂತಹ ಪರಿಹಾರ ಸೂತ್ರವನ್ನು ಸರ್ಕಾರ ರೂಪಿಸುವುದು ಒಳಿತು. ಇದರಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯವೂ ಬರಲಿದೆ. | ಎನ್.ಆರ್. ರಮೇಶ್ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ

ಬರಲಿಲ್ಲ ಸಿಐಡಿ ವರದಿ

2015-16ರಲ್ಲಿ ಪಾಲಿಕೆಯ ವಿವಿಧ ವಲಯಗಳಲ್ಲಿ ‘ಬಿ’ ಖಾತಾ ಸ್ವತ್ತುಗಳಿಗೆ ಅನಧಿಕೃತವಾಗಿ ‘ಎ’ ಖಾತಾ ನೀಡಿರುವ ಅಕ್ರಮ ಪ್ರಕರಣಗಳು ಬಯಲಾದವು. ಅಂದಾಜು 2.5 ಲಕ್ಷ ಸ್ವತ್ತುಗಳಿಗೆ ಅಕ್ರಮವಾಗಿ ಖಾತಾ ಮಾಡಿಕೊಟ್ಟಿದ್ದನ್ನು ದೃಢಪಡಿಸಿಕೊಳ್ಳಲು ಸಿಐಡಿ ತನಿಖೆಗೆ ವಹಿಸಲಾಯಿತು. ನಿಜಾಂಶ ತಿಳಿಯಲು ಅಧಿಕಾರಿಗಳ ತಂಡ ರಚಿಸಿತ್ತಾದರೂ ಈವರೆಗೂ ವರದಿ ನೀಡಿಲ್ಲ. ಹೈಕೋರ್ಟ್​ನಲ್ಲಿ ಪ್ರಕರಣ ದಾಖಲುಗೊಂಡು ‘ಎ’ ಖಾತಾ ದಾಖಲೆ ನೀಡಲು ಆಕ್ಷೇಪ ವ್ಯಕ್ತವಾಯಿತು. ಈ ಕಾರಣದಿಂದ ಸರ್ಕಾರ ಕಾನೂನು ಸಮರ ಮುಂದುವರಿಸಲು ನಿಧಾನ ಮಾಡಿದೆ. ಹೀಗಾಗಿ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಕಾನೂನಿನಲ್ಲಿ ‘ಬಿ’ ಖಾತಾ ಸ್ವತ್ತುಗಳಿಗೆ ಮಾನ್ಯತೆ ಇಲ್ಲ. ಹಾಗಂತ ಎ ಖಾತಾ ದಾಖಲಾತಿ ನೀಡಲು ಸರ್ಕಾರವೇ ಸ್ಪಷ್ಟ ನಿಲುವು ಕೈಗೊಂಡು ಪರಿಹಾರ ಕೈಗೊಳ್ಳಬೇಕು. ನಗರ ತಜ್ಞರು, ಕಾನೂನು ಪರಿಣಿತರು ಪ್ರಾಮಾಣಿಕ ಪ್ರಯತ್ನ ಮಾಡಿ ಮಾಹಿತಿ ನೀಡಬೇಕು. ಇದನ್ನು ಸರ್ಕಾರ ಎಲ್ಲ ವಿಧದಿಂದಲೂ ಪರಾಮರ್ಶೆ ನಡೆಸಿ ಕಾನೂನು ಚೌಕಟ್ಟಿನಲ್ಲಿ ಕಾಯ್ದೆ ರೂಪಿಸಿ ಜನರಿಗೆ ಒಳಿತು ಮಾಡುವ ಕೆಲಸ ಮಾಡುವ ಸವಾಲನ್ನು ಸ್ವೀಕರಿಸಲಿ. | ಪಿ.ಆರ್. ರಮೇಶ್ ಮಾಜಿ ಮೇಯರ್

ಸರ್ಕಾರದ ಮುಂದಿರುವ ಸವಾಲು?

  • ಕಾನೂನು ವ್ಯಾಪ್ತಿಯಲ್ಲಿ ಬಿ ಖಾತಾ ಸ್ವತ್ತಿಗೆ ಎ ಖಾತಾ ಸಾಧ್ಯವೇ?
  • ನಿಯಮಗಳಲ್ಲಿ ಅವಕಾಶ ಇಲ್ಲದಿರುವಾಗ ಹೊಸ ಕಾಯ್ದೆ ಸಾಧುವೆ?
  • ಎ ಖಾತಾ ಪ್ರಮಾಣಪತ್ರ ನೀಡಿದರೆ ಮಾಡಿದ ತಪ್ಪನ್ನು ಒಪ್ಪಿಕೊಂಡಂತೆ
  • ಹೀಗೆ ಮಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ
  • ಪಾಲಿಕೆಯಲ್ಲಿ ಚುನಾಯಿತ ಸರ್ಕಾರ ಇಲ್ಲದೆ ಪರಿಹಾರಕ್ಕೆ ಅಡ್ಡಿ

ಅನಧಿಕೃತ ಕಟ್ಟಡಗಳ ಸರ್ವೆ ಇಂದಿನಿಂದ

ರಾಜಧಾನಿಯಲ್ಲಿ ನಿಯಮಬಾಹಿರವಾಗಿ ನಿರ್ವಿುಸಿರುವ ಅನಧಿಕೃತ ಕಟ್ಟಡಗಳನ್ನು ಗುರುತಿಸುವ ಸರ್ವೆ ಕಾರ್ಯಕ್ಕೆ ಬಿಬಿಎಂಪಿ ಸೋಮವಾರ (ಅ.28) ಚಾಲನೆ ನೀಡಲಿದೆ. ನಕ್ಷೆ, ನಿರ್ಮಾಣ ಅನುಮತಿ ಪತ್ರ ಇಲ್ಲದೆ ನಿರ್ವಿುಸುವ ಕಟ್ಟಡಗಳಿಂದ ಇತರರಿಗೆ ತೊಂದರೆಯಾಗುತ್ತಿದೆ. ಇಂತಹ ಸ್ವತ್ತುಗಳಿಗೆ ತೆರಿಗೆ ನಿಗದಿ ಹಾಗೂ ಖಾತಾ ನೀಡಲು ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಈ ರೀತಿಯ ಚಟುವಟಿಕೆಗೆ ಕಡಿವಾಣ ಹಾಕಿ ಯೋಜಿತ ರೀತಿಯಲ್ಲಿ ಹಾಗೂ ಕಾನೂನುಬದ್ಧವಾಗಿ ನಿರ್ಮಾಣ ಕಾರ್ಯಕ್ಕೆ ಅವಕಾಶ ಒದಗಿಲು ಪಾಲಿಕೆ ನಿರ್ಧರಿಸಿದೆ.