ಮುಂಬೈ: ನಗರ ಪಾಲಿಕೆಯೊಂದರ ಉಪಮೇಯರ್ ಅವರು. ತಮ್ಮ ಟೊಯೊಟಾ ಫಾರ್ಚೂನರ್ ವಾಹನಕ್ಕೆ ಫ್ಯಾನ್ಸಿ ನಂಬರ್ ಅಳವಡಿಸಿಕೊಂಡು ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸಿದ್ದಲ್ಲದೆ, ವಾರಕ್ಕೆ ಎರಡು ಸಲ ದಂಡವನ್ನೂ ಪಾವತಿಸಿದ್ದಾರೆ. ಆದರೂ, ದಾದಾ ಎಂದು ಹಿಂದಿಯಲ್ಲಿ ಬಿಂಬಿತವಾಗಿರುವ ನಂಬರ್ ಪ್ಲೇಟ್ ಬದಲಾಯಿಸಿಲ್ಲ!
ಉಲ್ಲಾಸ್ನಗರ ಮುನ್ಸಿಪಲ್ ಕಾರ್ಪೊರೇಷನಿನ ಡೆಪ್ಯೂಟಿ ಮೇಯರ್ ಆರ್ಪಿಐ(ಎ) ಪಕ್ಷ ನಾಯಕ ಭಗವಾನ್ ಭಲೇರಾವ್ ಈ ರೀತಿ ನಿಯಮ ಉಲ್ಲಂಘಿಸಿ 'ದಾದಾ'ತನ ಮೆರೆಯುತ್ತಿರುವವರು. ತಮ್ಮ ಐಷಾರಾಮಿ ವಾಹನದ ನೋಂದಣಿ ಸಂಖ್ಯೆ 4141 ಅದಾಗಿದ್ದು, ಹಿಂದಿ ಅಂಕಿಯಲ್ಲಿ ನಂಬರ್ ಬರೆಯಿಸಿಕೊಂಡಿದ್ದಾರೆ. ಅದು ಮೇಲ್ನೋಟಕ್ಕೆ ದಾದಾ ಎಂಬಂತೆ ಭಾಸವಾಗುತ್ತಿದೆ.
ಈ ನಿಯಮ ಉಲ್ಲಂಘನೆಗಾಗಿ ಉಲ್ಲಾಸ್ನಗರ ಸಂಚಾರಿ ಪೊಲೀಸರು ಅಕ್ಟೋಬರ್ 29ರಂದು 1,200 ರೂಪಾಯಿ ದಂಡ ವಿಧಿಸಿದ್ದರು. ನಂತರವೂ ದಂಡ ವಿಧಿಸಿದ್ದಾರೆ. ಆದಾಗ್ಯೂ, ಬದಲಾಗಿಲ್ಲ. ಸಾಮಾಜಿಕ ಕಾರ್ಯಕರ್ತೆ ಸರಿತಾ ಕಂಚನ್ದಾನಿ ಎಂಬುವವರು ಈ ಬಗ್ಗೆ ಸಂಚಾರಿ ಪೊಲೀಸರಿಗೆ ದೂರು ನೀಡುತ್ತ ಬಂದಿದ್ದಾರೆ. ಕಳೆದ ವರ್ಷವೂ ಇದೇ ರೀತಿ ನೀಡಿದ್ದು, ಪೊಲೀಸರ ಕಣ್ತಪ್ಪಿಸಿ ಮತ್ತೆ ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಿಕೊಂಡು ಓಡಾಡುವುದನ್ನು ಅವರು ಮುಂದುವರಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)