|ವಿಲಾಸ ಮೇಲಗಿರಿ ಬೆಂಗಳೂರು
ಜನಪರ ಆಡಳಿತಕ್ಕೆ ಸುಧಾರಣಾ ಕ್ರಮಗಳು ಎಷ್ಟು ಅವಶ್ಯಕವೋ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ತರುವುದಕ್ಕೆ ನೌಕರರ ಕಾರ್ಯಕ್ಷಮತೆಯೂ ಅಷ್ಟೇ ಅವಶ್ಯ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಶಿಕ್ಷಣ ಇಲಾಖೆ, ಅನುಕಂಪದ ಆಧಾರದ ಮೇಲೆ ನೇಮಕಗೊಂಡಿರುವ ಹಾಗೂ ನಿಕೃಷ್ಟ ಕಾರ್ಯನಿರ್ವಹಣೆಯ ‘ಸಿ’ ದರ್ಜೆಯ ನೌಕರರಿಗೆ 100 ಅಂಕಗಳ ಪರೀಕ್ಷೆಗೆ ಸಿದ್ಧತೆ ನಡೆಸಿದೆ. ಕಾಯಂ ಪೂರ್ವ ಸೇವಾವಧಿ ಘೋಷಣೆಗೆ ಮುನ್ನ ಈ ಪರೀಕ್ಷೆ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ. ತನ್ನ ನೌಕರರ ಕಾರ್ಯದಕ್ಷತೆ ಹೆಚ್ಚಿಸುವುದಕ್ಕಾಗಿ ಶಿಕ್ಷಣ ಇಲಾಖೆ ಕೈಗೊಂಡಿರುವ ಈ ಕ್ರಮವನ್ನು ಶೀಘ್ರವೇ ಇತರ ಇಲಾಖೆಗಳಿಗೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.
ಪರೀಕ್ಷೆ ಏಕೆ ಅವಶ್ಯಕ?: ಕಡತಗಳಲ್ಲಿ ವಿಷಯಕ್ಕೆ ಸಂಬಂಧಿಸಿ ದಂತೆ ನಿಯಮಗಳನ್ನು ನಮೂದಿಸದೇ ಮಂಡಿಸುತ್ತಿರುವುದು, ಕಡತಗಳಲ್ಲಿನ ಟಿಪ್ಪಣಿ ಹಾಳೆಗಳಲ್ಲಿ ಬಹಳಷ್ಟು ಕಾಗುಣಿತ ದೋಷಗಳಿರುವುದು, ಕನಿಷ್ಠ ಕಂಪ್ಯೂಟರ್ ಜ್ಞಾನ ಹೊಂದದೇ ಇರುವುದು ಇಲಾಖೆ ಕಾರ್ಯಕ್ಷಮತೆ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಸಾರ್ವಜನಿಕರು ಹಾಗೂ ನೌಕರರಿಗೂ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ ಎಂಬ ಕೊರಗಿದೆ.
ಜ್ಞಾನದ ಕೊರತೆ: ಶಿಕ್ಷಣ ಇಲಾಖೆಯ ‘ಸಿ’ ದರ್ಜೆ ನೌಕರನ ಕಾಯಂ ಪೂರ್ವ ಸೇವಾವಧಿ ಘೊಷಣೆ ಮಾಡುವ ಮುನ್ನ ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಲೋಯರ್ / ಹೈಯರ್, ಜನರಲ್ ಲಾ- ಭಾಗ 6, ಕನ್ನಡ ಭಾಷಾ ಪರೀಕ್ಷೆ ಮತ್ತು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳನ್ನು ಉತ್ತೀರ್ಣ ರಾಗಿರಬೇಕೆಂಬ ಮಾನದಂಡ ನಿಗದಿಪಡಿಸಲಾಗಿರುತ್ತದೆ. ಈ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ಕಾಯಂ ಪೂರ್ವ ಸೇವಾವಧಿ ಘೊಷಣೆಯಾಗಿ ಇಲಾಖೆಯಲ್ಲಿ ಅನೇಕ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ನೌಕರರ ಪೈಕಿ ಬಹುತೇಕರು ಇಲಾಖೆ ನಿಯಮಗಳ ಕುರಿತು ಪರಿಪೂರ್ಣ ಜ್ಞಾನ ಹೊಂದದೇ ಇರುವುದು ಕಂಡು ಬಂದಿದೆ.
ಸುತ್ತೋಲೆಯಲ್ಲೇನಿದೆ?: ಇನ್ನು ಮುಂದೆ ರಾಜ್ಯದ ಎಲ್ಲ ಗ್ರೂಪ್ ‘ಸಿ’ ವೃಂದದ ನೌಕರರ ಕಾಯಂ ಪೂರ್ವ ಸೇವಾವಧಿ ಘೊಷಣೆ ಮಾಡುವ ಮುನ್ನ ಕಡ್ಡಾಯವಾಗಿ ವೃತ್ತಿ ಬುನಾದಿ ಹಾಗೂ ಇತರ ತರಬೇತಿಗಳಿಗೆ ನಿಯೋಜಿಸಬೇಕು. ನಿಯಮಾನುಸಾರ ಎಲ್ಲ ಇಲಾಖಾ ಪರೀಕ್ಷೆಗಳನ್ನು ಉತ್ತೀರ್ಣರಾದವರಿಗೆ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣತಿ ಕುರಿತು ವಿಭಾಗ ಮಟ್ಟದ ಜಂಟಿ ನಿರ್ದೇಶಕರು ಪ್ರತಿ ಮಾಹೆ 100 ಅಂಕಗಳಿಗೆ ಪರೀಕ್ಷೆ ನಡೆಸಬೇಕು ಮತ್ತು ಫಲಿತಾಂಶವನ್ನು ಕಾಯಂ ಪೂರ್ವ ಸೇವಾವಧಿ ಘೊಷಣೆ ಮಾಡುವ ಪ್ರಾಧಿಕಾರಕ್ಕೆ ಕಳುಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದ್ದಾರೆ.
|ಆರ್.ವಿಶಾಲ್ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ
| ಎಲ್.ಕೆ. ಅತೀಕ್ ಪ್ರಭಾರ ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
ಆಡಳಿತ ಯಂತ್ರ ಕುಸಿವ ಆತಂಕ: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಇತ್ತೀಚೆಗೆ ನೇಮ ಕಾತಿ ನಡೆದಿಲ್ಲ. ಅದರಲ್ಲೂ ವಿಶೇಷವಾಗಿ ‘ಸಿ’ ಗುಂಪಿನ ನೌಕರರ ನೇಮಕವಾಗಿಲ್ಲ. ಆದರೆ, ಅನುಕಂಪದ ಆಧಾರದ ಮೇಲೆ 600ಕ್ಕೂ ಹೆಚ್ಚು ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ನೌಕರರು ದ್ವಿತೀಯ ಪಿಯು ಇಲ್ಲವೆ ಪದವಿ ಮಾತ್ರ ಪಡೆದಿದ್ದಾರೆ. ಅವರಿಗೆ ಇಲಾಖೆ/ಸರ್ಕಾರ/ ಆಡಳಿತಕ್ಕೆ ಸಂಬಂಧಿಸಿದ ಮಾಹಿತಿ ಕೊರತೆ ಇದೆ. ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಲು ನಿರ್ಧರಿಸಿದೆ.