ನ್ಯೂಸ್

ಹಲ್ಲು ನೋವು ಬಂದರೆ ಇನ್ನೆರಡು ತಿಂಗಳು ಚಿಕಿತ್ಸೆ ಸಿಗುವುದು ಅನುಮಾನ, ಇದು ಕೋವಿಡ್​ 19 ಗಿಫ್ಟ್​!

ಬೆಂಗಳೂರು: ಹಲ್ಲು ನೋವು ಸೇರಿ ಹಲ್ಲಿನ ಸಂಬಂಧಿಸಿದ ಏನೇ ತೊಂದರೆ ಬಂದರೂ ಇನ್ನೆರಡು ತಿಂಗಳು ಸಹಿಸಿಕೊಳ್ಳುವುದು ಅನಿವಾರ್ಯ! ಏಕೆಂದರೆ ಇನ್ನೆರಡು ತಿಂಗಳು ರಾಜ್ಯದಲ್ಲಿ ದಂತ ವೈದ್ಯರ ಸೇವೆ ಲಭಿಸುವುದು ಅನುಮಾನ! ಇದು ವಿಶ್ವಮಾರಿ ಕೋವಿಡ್​ 19 ಸೋಂಕು ತಂದಿರುವ ಪೇಚು.

ಇದು ಒಬ್ಬಿಬರ ಕಥೆಯಲ್ಲಿ. ರಾಜ್ಯದಲ್ಲಿರುವ 26 ಸಾವಿರ ಹಲ್ಲಿನ ವೈದ್ಯರ ಸಂಕಷ್ಟದ ಕಥೆ. ಅಷ್ಟೇ ಅಲ್ಲ, ಇವರನ್ನು ನಂಬಿಕೊಂಡು ಕ್ಲಿನಿಕ್​, ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಸಹಾಯಕ ಸಿಬ್ಬಂದಿಯ ಪರಿಸ್ಥಿತಿಯೂ ಇದಾಗಿದೆ.

ಏಕೆ ಹೀಗೆ?: ಹಲ್ಲಿನ ಸಮಸ್ಯೆ ಹೇಳಿಕೊಂಡು ಬರುವ ರೋಗಿಯನ್ನು ದಂತ ವೈದ್ಯರು ತುಂಬಾ ಹತ್ತಿರದಿಂದ ಪರಿಶೀಲಿಸಬೇಕಾಗುತ್ತದೆ. ಒಂದು ವೇಳೆ ರೋಗಿ ಕರೊನಾ ಸೋಂಕಿತನಾಗಿದ್ದರೂ ತಕ್ಷಣದಲ್ಲೇ ಲಕ್ಷಣಗಳು ಕಾಣಿಸುವುದಿಲ್ಲ. ಹಾಗಾಗಿ, ಸೋಂಕಿತನಿಗೆ ಚಿಕಿತ್ಸೆ ಕೊಡಲು ದಂತ ವೈದ್ಯರು ಮುಂದಾದಾಗ, ರೋಗಿಯ ಬಾಯಿಯಿಂದ ಬರುವ ಉಸಿರಿನಲ್ಲಿರುವ ಏರೋಸಾಲ್​ಗಳು ವೈದ್ಯರ ಉಸಿರಿನೊಂದಿಗೆ ಬೆರೆತು ಅವರಿಗೂ ಕರೊನಾ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದ್ದರಿಂದ, ದಂತ ವೈದ್ಯರು ಸದ್ಯ ತಮ್ಮ ಕ್ಲಿನಿಕ್​ಗಳನ್ನು ಮುಚ್ಚಿದ್ದು, ಮನೆಯಲ್ಲೇ ಲಾಕ್​ಡೌನ್​ ಆಗಿದ್ದಾರೆ.

ಕರ್ನಾಟಕ ದಂತ ಮಂಡಳಿಯಲ್ಲಿ 46 ಸಾವಿರ ದಂತ ವೈದ್ಯರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಇವರ ಪೈಕಿ 26 ಸಾವಿರ ಜನರು ಕ್ರಿಯಾಶೀಲವಾಗಿ ಪ್ರಾಕ್ಟೀಸ್​ ಮಾಡುತ್ತಿದ್ದಾರೆ. ಕೋವಿಡ್​ 19 ಪಿಡುಗಿನಿಂದಾಗಿ ಕ್ಲಿನಿಕ್​ಗಳನ್ನು ಮುಚ್ಚಿರುವುದರಿಂದ, ದಂತ ವೈದ್ಯರು ಮಾಡಿರುವ ಸಾಲದ ಕಂತಿನ ಪಾವತಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಬೇಕು. ಹಾಗೂ ಬಡ್ಡಿಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಕರ್ನಾಟಕ ದಂತ ಮಂಡಳಿಯ (ಕೆಡಿಸಿ) ಅಧ್ಯಕ್ಷ ಡಾ. ರಾಜಕುಮಾರ್​ ಎಸ್​. ಅಲ್ಲೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪಿಪಿಇಗಳಿಗೆ ಬೇಡಿಕೆ: ದಂತ ವೈದ್ಯರು ಇದೀಗ ವೈಯಕ್ತಿಕ ರಕ್ಷಣಾ ಸಾಧನ (ಪರ್ಸನಲ್​ ಪ್ರೊಟೆಕ್ಷನ್​ ಎಕ್ವಿಪ್​ಮೆಂಟ್​-ಪಿಪಿಇ) ಧರಿಸಿಕೊಂಡು ಚಿಕಿತ್ಸೆ ಕೊಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಅಲ್ಲದೆ, ಇದನ್ನು ಕಡಿಮೆ ಬೆಲೆಗೆ ತಮ್ಮೆಲ್ಲರಿಗೂ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಪಿಪಿಇಗಳನ್ನು ಧರಿಸಿ ಚಿಕಿತ್ಸೆ ಕೊಡುವುದು ಹೆಚ್ಚು ಸುರಕ್ಷಿತ. ಆದ್ದರಿಂದ, ಪಿಪಿಇಗಳನ್ನು ಕಡಿಮೆ ದರದಲ್ಲಿ ದಂತ ವೈದ್ಯರಿಗೆ ಸರಬರಾಜು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಾಗರಬಾವಿಯಲ್ಲಿ ಕ್ಲಿನಿಕ್​ ಹೊಂದಿರುವ ಡಾ. ದೀಕ್ಷಾ ಶಾಸ್ತ್ರಿ ಮನವಿ ಮಾಡಿಕೊಂಡಿದ್ದಾರೆ.