ನ್ಯೂಸ್

ವೇತನ ಚಳವಳಿ ಕಹಳೆ: ಕೇಂದ್ರ ಸಿಬ್ಬಂದಿಗೆ ಸಮನಾದ ನೀತಿಗೆ ರಾಜ್ಯ ನೌಕರರ ಪಟ್ಟು

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿಯಂತೆ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ನೀಡಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇದರಿಂದ ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಬೇಕಾಗಲಿದೆ.

ರಾಜ್ಯದಲ್ಲಿ ಮುಂದಿನ ವೇತನ ಆರೋಗ 2022ರ ಜುಲೈಗೆ ರಚನೆಯಾಗಬೇಕಾಗಿದೆ. ಆದರೆ ಅದಕ್ಕೂ ಮೊದಲೇ ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಿರುವ ನೌಕರರ ಸಂಘಟನೆಗಳು ಮುಂದಿನ ದಿನಗಳಲ್ಲಿ ಸಚಿವಾಲಯ ಬಂದ್ ಸೇರಿದಂತೆ ವಿವಿಧ ಹೋರಾಟದ ಮುನ್ಸೂಚನೆ ನೀಡಿವೆ.

ಸಿಎಂ ಬಸವರಾಜ ಬೊಮ್ಮಾಯಿ ಮುಂದಿನ ಮಾರ್ಚ್​ನಲ್ಲಿ ಮಂಡಿಸಲಿರುವ ಆಯವ್ಯಯದಲ್ಲಿ ವೇತನ ಆಯೋಗ ಘೋಷಿಸುವ ನಿರೀಕ್ಷೆ ಇರುವುದರಿಂದ ನೌಕರರು ಈಗಲೇ ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಿದ್ದಾರೆ. ಆರಂಭದಲ್ಲೇ ದೊಡ್ಡ ಹೋರಾಟದ ಬದಲು ಗಾಂಧಿಮಾರ್ಗದಲ್ಲಿ ಬೇಡಿಕೆ ಈಡೇರಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಕೇಂದ್ರ ನೌಕರರಿಗೆ ಸಮಾನವಾದ ವೇತನ ಬೇಕೆಂಬುದು ದಶಕಕ್ಕೂ ಹೆಚ್ಚು ಕಾಲದ ಬೇಡಿಕೆಯಾಗಿದೆ. ಆದರೆ ಎಲ್ಲ ಸರ್ಕಾರಗಳು ಕೇವಲ ವೇತನ ಹೆಚ್ಚಳ ಮಾಡಿ ಕೈ ತೊಳೆದುಕೊಳ್ಳುತ್ತಿವೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕೇಂದ್ರ ಮಾದರಿ ವೇತನ ಜಾರಿಯಲ್ಲಿದೆ. ತೆಲಂಗಾಣದ ನೌಕರರು ಕೇಂದ್ರಕ್ಕಿಂತ ಹೆಚ್ಚಿನ ವೇತನವನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿಯೂ ಹೈಕೋರ್ಟ್ ನೌಕರರಿಗೆ ಕೇಂದ್ರ ಮಾದರಿ ವೇತನ ಸಿಗುತ್ತಿದೆ.

ಸಚಿವಾಲಯ ಬಂದ್: ಸರ್ಕಾರಿ ನೌಕರರ ಸಂಘದ ಹೋರಾಟ ಒಂದೆಡೆಯಾದರೆ ಸಚಿವಾಲಯ ನೌಕರರ ಸಂಘ ಒಂದು ಹೆಜ್ಜೆ ಮುಂದೆ ಹೋಗಿ ಸಚಿವಾಲಯ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಲು ನಿರ್ಧರಿಸಿದೆ. ಬೆಳಗಾವಿ ಅಧಿವೇಶನ ಮುಗಿದ ನಂತರ ಬಂದ್ ದಿನಾಂಕ ನಿಗದಿಗೆ ಸಂಘದ ಸಭೆ ನಡೆಯಲಿದೆ.

ಸರ್ಕಾರಕ್ಕೆ ಚಿಂತೆ ಏಕೆ?: ಕೇಂದ್ರ ಮಾದರಿ ವೇತನ ನೀಡಿದರೆ ವಾರ್ಷಿಕ ಸುಮಾರು 17,500 ಕೋಟಿ ರೂ. ಹೊರೆ ಬೀಳಲಿದೆ. ಅಷ್ಟು ದೊಡ್ಡ ಮೊತ್ತವನ್ನು ಸರ್ಕಾರ ಭರಿಸಲು ಒಪು್ಪವುದೇ ಎಂಬ ಅನುಮಾನವೂ ಇದೆ. ಆದರೆ 2.5 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸುವ ಸರ್ಕಾರಕ್ಕೆ ಇದು ದೊಡ್ಡ ಮೊತ್ತವೇನಲ್ಲ ಎಂಬುದು ನೌಕರರ ಅಭಿಪ್ರಾಯ.

5 ಆಯೋಗ ರಚನೆಯಾಗಲಿಲ್ಲ: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 1966 ರಿಂದ 2017ರ ಅವಧಿಯಲ್ಲಿ 11 ವೇತನ ಆಯೋಗಗಳು ರಚನೆಯಾಗಬೇಕಾಗಿತ್ತು. ಆದರೆ ಈವರೆಗೆ 6 ಮಾತ್ರ ರಚನೆ ಆಗಿದೆ. 3 ಅಧಿಕಾರಿ ಸಮಿತಿ ಹಾಗೂ ಒಂದು ಸಂಪುಟ ಉಪ ಸಮಿತಿ ರಚನೆಯಾಗಿದೆ. ಇದರಿಂದಾಗಿ ವೇತನ ಅಸಮತೋಲನ ಮುಂದುವರಿದಿದೆ.

ನೌಕರರ ಕೊರತೆ: ರಾಜ್ಯದಲ್ಲಿ ನೌಕರರ ಕೊರತೆ ವಿಚಾರವೂ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ 7,79,439 ಹುದ್ದೆ ಮಂಜೂರಾಗಿದ್ದು, ಅದರಲ್ಲಿ 5,09,807 ಹುದ್ದೆಗಳಲ್ಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. 2,69,527 ಹುದ್ದೆ ಖಾಲಿ ಇವೆ. ಕೇರಳದಲ್ಲಿ 3.34 ಕೋಟಿ ಜನಸಂಖ್ಯೆಗೆ 5.21 ಲಕ್ಷ ನೌಕರರಿದ್ದಾರೆ. ಮುಂದುವರಿದ ದೇಶಗಳಲ್ಲಿ ಒಂದು ಲಕ್ಷ ಜನಸಂಖ್ಯೆಗೆ 630 ನೌಕರರಿದ್ದರೆ, ನಮ್ಮಲ್ಲಿ 138 ನೌಕರರಿದ್ದಾರೆ. ಸರ್ಕಾರ ಹುದ್ದೆ ಕಡಿತ ಮಾಡಲು ಮುಂದಾಗಿರುವ ಸಂದರ್ಭದಲ್ಲಿ ಖಾಲಿ ಹುದ್ದೆ ಭರ್ತಿ ಮೂಲಕ ನೌಕರರ ಒತ್ತಡ ತಗ್ಗಿಸಬೇಕೆಂಬ ಬೇಡಿಕೆ ಸಲ್ಲಿಕೆಯಾಗುತ್ತಿದೆ.

ಎನ್​ಪಿಎಸ್ ಮರುಜಾರಿಗೆ ಒತ್ತಾಯಿಸಿ ಜನವರಿಯಲ್ಲಿ ಹೋರಾಟ ಆರಂಭಿಸಲಿದ್ದೇವೆ. ಸರ್ಕಾರ ಹುದ್ದೆ ರದ್ದು ಮಾಡಬಾರದು, ಹುದ್ದೆಗಳ ರದ್ದತಿಯೇ ಆಡಳಿತ ಸುಧಾರಣೆ ಎಂಬ ಭ್ರಮೆಯಿಂದ ಹೊರಬರಬೇಕು.

| ಶಾಂತರಾಮ ಅಧ್ಯಕ್ಷ, ಎನ್​ಪಿಎಸ್ ನೌಕರರ ಸಂಘ

ಹಂತ ಹಂತದ ಹೋರಾಟ: ಸರ್ಕಾರಿ ನೌಕರರು ಹಂತಹಂತವಾಗಿ ಹೋರಾಟ ನಡೆಸಲಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಆಯಾ ಜಿಲ್ಲಾ ಕೇಂದ್ರದಲ್ಲಿ ಸಚಿವರು, ಶಾಸಕರು, ಸಂಸದರಿಗೆ ಕೇಂದ್ರದ ಮಾದರಿ ವೇತನಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಅರ್ಪಿಸಲಿದ್ದಾರೆ. ಜನವರಿಯಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಮೂಲಕ ಮನವಿ ಕಳುಹಿಸಲಿದ್ದಾರೆ. ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಸರ್ಕಾರದ ಗಮನ ಸೆಳೆಯಲಿದ್ದಾರೆ.

ಏನಿದೆ ಅಸಮಾನತೆ?: ಕೇಂದ್ರ, ರಾಜ್ಯ ಸರ್ಕಾರಿ ನೌಕರರ ನಡುವೆ ವೇತನ ತಾರತಮ್ಯ ಇದೆ. ಕೇಂದ್ರ ಸರ್ಕಾರದ ವೇತನ ಶ್ರೇಣಿ ನೀಡಿದರೆ ಶೇ.11ರಿಂದ 55 ಹೆಚ್ಚಳವಾಗುತ್ತದೆ ಎಂಬುದು ಒಂದು ಅಂದಾಜು. ತುಟ್ಟಿಭತ್ಯೆಯಲ್ಲಿಯೂ ಕೇಂದ್ರ, ರಾಜ್ಯ ನೌಕರರ ನಡುವೆ ಶೇ.7 ವ್ಯತ್ಯಾಸವಿದೆ. ಕೇಂದ್ರ ನೌಕರರಿಗೆ 1 ರೂ. ನೀಡಿದರೆ, ರಾಜ್ಯ ನೌಕರರಿಗೆ 96 ಪೈಸೆ ನೀಡಲಾಗುತ್ತದೆ. ಇದಲ್ಲದೆ, ಕೇಂದ್ರದಲ್ಲಿ ಸಾಕಷ್ಟು ಬೇರೆ ಬೇರೆ ಕೊಡುಗೆಗಳಿವೆ.

ಕೇಂದ್ರ ನೌಕರರ ವೇತನಕ್ಕೆ ಸಮಾನವಾದ ವೇತನವನ್ನು ಪಡೆದೇ ತೀರುತ್ತೇವೆ. ಸರ್ಕಾರ ನಮ್ಮ ಒತ್ತಡಕ್ಕೆ ಮಣಿಯುತ್ತದೆ ಎಂಬ ವಿಶ್ವಾಸವಿದೆ. ದೊಡ್ಡ ಹೋರಾಟವನ್ನೇನೂ ಮಾಡದೆ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ.

| ಸಿ.ಎಸ್. ಷಡಾಕ್ಷರಿ ಅಧ್ಯಕ್ಷ, ಸರ್ಕಾರಿ ನೌಕರರ ಸಂಘ

ವೇತನ ಆಯೋಗದ ರಚನೆ ಬೇಡ, ನ್ಯಾಯಾಧೀಶರ ಅಧ್ಯಕ್ಷತೆ ಸಮಿತಿ ಮಾಡಿ, ವರದಿ ಪಡೆದು ಕೇಂದ್ರ ವೇತನ ಜಾರಿಗೆ ಕೊಡಲಿ. ಹುದ್ದೆ ಕಡಿತ ಮಾಡಬಾರದು. ಎನ್​ಪಿಎಸ್ ರದ್ದು ಮಾಡಬೇಕು. ಇಲ್ಲದಿದ್ದರೆ ಸಚಿವಾಲಯ ಬಂದ್ ಮಾಡುತ್ತೇವೆ.

| ಪಿ.ಗುರುಸ್ವಾಮಿ ಅಧ್ಯಕ್ಷ, ಸಚಿವಾಲಯ ನೌಕರರ ಸಂಘ

ಎನ್​ಪಿಎಸ್ ಮುನ್ನೆಲೆಗೆ: ನೌಕರರ ನೂತನ ಪಿಂಚಣಿ ಪದ್ಧತಿ ರದ್ದು ಮಾಡಿ ಹಳೆಯ ಪಿಂಚಣಿ ಪದ್ಧತಿ ಮರುಜಾರಿಗಾಗಿ ಒತ್ತಡವಿದೆ. ಸಿಎಸ್ ರವಿಕುಮಾರ್ ಅಧ್ಯಕ್ಷತೆಯ ಸಮಿತಿ ಒಂದು ಸಭೆ ಮಾತ್ರ ನಡೆಸಿದೆ.

ನೌಕರರ ವಾದವೇನು?

  • ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಕೆಲಸದಲ್ಲಿ ವ್ಯತ್ಯಾಸವಿಲ್ಲ
  • ಕೇಂದ್ರ ಸರ್ಕಾರಿ ನೌಕರರಿಗೆ ಈಗಾಗಲೇ ಹೆಚ್ಚಿನ ಸೌಲಭ್ಯಗಳಿವೆ
  • ವೇತನ ಆಯೋಗ ಕಾಲಕಾಲಕ್ಕೆ ರಚನೆಯಾಗದ್ದರಿಂದ ಅನ್ಯಾಯ
  • ಹುದ್ದೆಗಳ ರದ್ದತಿ ಮಾಡಿದರೆ ನೌಕರರ ಮೇಲೆ ಒತ್ತಡ

ಸರ್ಕಾರದ ಅನಿಸಿಕೆ

  • ಒಂದೇ ಸಲ 17,500 ಕೋಟಿ ರೂ. ಹೊರೆ
  • ಹುದ್ದೆ ಕಡಿತ ಮಾಡಿದರೆ ಸರ್ಕಾ ರಕ್ಕೆ ಉಳಿತಾಯ
  • ಕಾಲಕಾಲಕ್ಕೆ ವೇತನ ಪರಿಷ್ಕರಣೆಯಾಗುತ್ತಿದೆ
  • ಕರೊನಾ, ಇತರ ಕಾರಣದಿಂದ ಆರ್ಥಿಕ ಸಂಕಷ್ಟ