ನ್ಯೂಸ್

ಟನ್​ಗೆ 5,500 ರೂ. ಕೊಟ್ಟು ಕಾರ್ಖಾನೆ ಆರಂಭಿಸಲು ಪಟ್ಟು: ಸಕ್ಕರೆ ಸಚಿವರ ಮನೆ ಮುಂದೆ ಕಬ್ಬು ಸುರಿದು ಆಕ್ರೋಶ! Sugarcane Farmers

ಹಾವೇರಿ: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಕಬ್ಬು ಬೆಳೆಗಾರರ ಹೋರಾಟ ನಡೆಯುತ್ತಿದ್ದು, ಇಂದು (ಶುಕ್ರವಾರ, ಅ.30) ಹಾವೇರಿಯಲ್ಲಿ ರೈತರ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಟನ್​ ಕಬ್ಬಿಗೆ 5,500 ರೂ. ದರ ನಿಗದಿಪಡಿಸುವವರೆಗೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ಮನೆ ಎದುರು ಕಬ್ಬಿನ ಟ್ರ್ಯಾಕ್ಟರ್ ಸಮೇತ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಸಚಿವರ ಮನೆ ಎದುರೇ ಕಬ್ಬು ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತರು, ಜಿಲ್ಲಾಧಿಕಾರಿಗಳ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.

ಕಬ್ಬಿಗೆ ಸೂಕ್ತ ದರ ನಿಗದಿಪಡಿಸಿ ಬಳಿಕ ಕಾರ್ಖಾನೆಗಳನ್ನು ಪ್ರಾರಂಭಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಜಿಲ್ಲಾಡಳಿತ ಹಾಗೂ ಕಾರ್ಖಾನೆ ಆಡಳಿತ ಮಂಡಳಿಗಳು ರೈತರ ಮನವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರೊಂದಿಗೆ ಚರ್ಚಿಸದೆ ರಾತ್ರೋರಾತ್ರಿ ಕಾರ್ಖಾನೆಗಳನ್ನು ಆರಂಭಿಸಲಾಗಿದೆ. ಇದನ್ನು ಪ್ರಶ್ನಿಸಿದ ರೈತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಜಿಲ್ಲೆಯ ಜಿ.ಎಂ. ಶುಗರ್ಸ್, ತಿಮ್ಮನಕಟ್ಟಿ ಹಾಗೂ ಮುಂಡರಗಿ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಮೊದಲು ಕಬ್ಬಿಗೆ ದರ ನಿಗದಿಪಡಿಸಬೇಕು. ಅಲ್ಲಿಯವರೆಗೆ ಕಾರ್ಖಾನೆಗಳನ್ನು ಬಂದ್ ಮಾಡಬೇಕು. ರೈತರ ಬೇಡಿಕೆ ಈಡೇರಿದ ಬಳಿಕವೇ ಕಬ್ಬು ಅರೆಯುವ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಬೇಕು. ರೈತರೊಂದಿಗೆ ಚರ್ಚಿಸದೆ ಕಾರ್ಖಾನೆ ಆರಂಭಿಸಿರುವ ಈ ಕ್ರಮ ಸರಿಯಿಲ್ಲ. ಕಬ್ಬು ಬೆಳೆಗಾರರ ಹಿತ ಕಾಪಾಡಲು ಸಚಿವರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.