ನ್ಯೂಸ್

ಬಡವರ ವಸತಿ ಯೋಜನೆ, ಜಿಎಸ್​ಟಿ ವಿನಾಯ್ತಿಗೆ ಮೊರೆ: ಕೇಂದ್ರಕ್ಕೆ ಮನವಿ ಮಾಡಲು ರಾಜ್ಯದ ನಿರ್ಧಾರ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಗುಡಿಸಲು ಮುಕ್ತ ರಾಜ್ಯ ಮಾಡುವ ಉದ್ದೇಶದಿಂದ ಬಡವರಿಗೆ ಸೂರು ಕಲ್ಪಿಸಲು ವಸತಿ ಯೋಜನೆಗಳಿಗೆ ಜಿಎಸ್​ಟಿ ಯಿಂದ ವಿನಾಯ್ತಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಲು ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ವಸತಿ ಯೋಜನೆಗಳನ್ನು ರೂಪಿಸುತ್ತವೆ. ಪ್ರತಿ ವರ್ಷ ಲಕ್ಷಾಂತರ ಮನೆಗಳ ನಿರ್ವಣದ ಘೋಷಣೆಯಾಗುತ್ತವೆ. ಬಡವರಿಗೆ ನೀಡುವ ವಸತಿ ಯೋಜನೆಗಳಲ್ಲಿ ಸರ್ಕಾರದ ಸಹಾಯಧನವೂ ಇರುತ್ತದೆ. ಹೀಗಿದ್ದರೂ ಮನೆಗಳ ನಿರ್ಮಾಣ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಪೂರ್ಣವಾಗುತ್ತಿಲ್ಲ. ಅದರಲ್ಲೂ, ಆಯಾ ವರ್ಷವೇ ಪೂರ್ಣಗೊಂಡು ಹಂಚಿಕೆಯಾಗುವ ಮನೆಗಳ ಪ್ರಮಾಣ ಶೇ.18 ರಷ್ಟು ಮಾತ್ರ ಇದೆ. ಇದಕ್ಕೆ ಸಾಕಷ್ಟು ಸಮಸ್ಯೆಗಳು ಕಾರಣವಾಗಿವೆ. ಬ್ಯಾಂಕ್​ಗಳು ಸಾಲ ಮಂಜೂರು ಮಾಡುವಲ್ಲಿ ಸತಾಯಿಸುತ್ತವೆ. ಸಾಲ ಮಂಜೂರಾದರೂ ಜಿಎಸ್​ಟಿಯಿಂದಾಗಿ ಬಡವರಿಗೆ ಹೊರೆ ಇಳಿಯುತ್ತಿಲ್ಲ.

ಏನಿದು ಜಿಎಸ್​ಟಿ ಸಮಸ್ಯೆ: ಬಹುತೇಕ ಯೋಜನೆಗಳಲ್ಲಿ ಸಬ್ಸಿಡಿಯ ಮೊತ್ತವನ್ನು ಜಿಎಸ್​ಟಿ ರೂಪದಲ್ಲಿ ಸರ್ಕಾರ ಹಿಂದಕ್ಕೆ ಪಡೆಯುತ್ತಿದೆ. ಹೀಗಾಗಿ ಬಡವರು ಪೂರ್ಣ ಹಣ ಹಾಕಿಕೊಂಡು ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲಾಗುತ್ತಿಲ್ಲ.ಇದರಿಂದ ಬಹುತೇಕ ವಸತಿ ಯೋಜನೆಗಳ ಸ್ಥಿತಿ ತ್ರಿಶಂಕುವಾಗಿದೆ.

ಕೇಂದ್ರ ಸರ್ಕಾರದ ನೆರವಿನ ಯೋಜನೆಗಳಲ್ಲಿ ಪ್ರತಿ ಮನೆಗೆ 1.50 ಲಕ್ಷ ರೂ. ಸಬ್ಸಿಡಿ ಸಿಗುತ್ತದೆ. ಆದರೆ, ಜಿಎಸ್​ಟಿ ರೂಪದಲ್ಲಿ ಸರ್ಕಾರಕ್ಕೆ 1.25 ಲಕ್ಷ ರೂ. ಮರಳಿ ಹೋಗುವುದರಿಂದ ಫಲಾನುಭವಿಗೆ ಉಳಿಯುವುದು ಕೇವಲ 25 ಸಾವಿರ ರೂ. ಮಾತ್ರ.

ಹೇಗೆ ಸಾಧ್ಯ?: ವಸತಿ ಯೋಜನೆಗಳಿಗೆ ಜಿಎಸ್​ಟಿ ವಿನಾಯ್ತಿ ಹೇಗೆ ಸಾಧ್ಯ? ಜಿಎಸ್​ಟಿ ಸಂಗ್ರಹಣೆಯ ಮೇಲೆ ಪರಿಣಾಮ ಬೀರುವುದಿಲ್ಲವೇ? ದುರುಪಯೋಗ ಆಗುವುದಿಲ್ಲವೇ ಎಂಬ ಪ್ರಶ್ನೆಗಳೂ ಇವೆ. ಅದಕ್ಕೆ ಪೂರಕವಾದ ನಿಯಮಗಳನ್ನು ರೂಪಿಸಿದರೆ ದುರುಪಯೋಗ ತಡೆಗಟ್ಟಬಹುದು ಹಾಗೂ ಬಡವರಿಗೆ ಅನುಕೂಲ ಮಾಡಿಕೊಡಬಹುದೆಂಬ ಅಭಿಪ್ರಾಯಗಳು ತಜ್ಞರಿಂದ ಬರುತ್ತಿವೆ.

ಬಡವರಿಗೆ ಉಚಿತ: ವಸತಿ ಯೋಜನೆ ಫಲಾನುಭವಿಗಳು ನಿಗದಿತ ಮೊತ್ತ ಭರಿಸಬೇಕಿರುತ್ತದೆ. ಆದರೆ, ಬ್ಯಾಂಕ್​ಗಳಲ್ಲಿ ಸಾಲ ಸಿಗದೇ ಮನೆ ಮಂಜೂರಾದರೂ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಫಲಾನುಭವಿಗಳ ಪಾಲಿನ ಮೊತ್ತವನ್ನು ಸರ್ಕಾರದಿಂದಲೇ ಭರಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿಸಿದರೆ, ದೊಡ್ಡ ಪ್ರಮಾಣದ ಮೊತ್ತವನ್ನು ಭರಿಸಬೇಕಾಗುತ್ತದೆ.

ಮನೆ ಹಂಚಿಕೆ ಹೇಗಿದೆ?: ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 2023ರಿಂದ 1.86 ಲಕ್ಷ ಮನೆ ನಿರ್ವಿುಸುತ್ತಿದ್ದರೂ ಹಂಚಿಕೆ ಪ್ರಮಾಣ ಶೇ.30 ರಷ್ಟು ಇಲ್ಲ. ಇದು ವಸತಿ ಯೋಜನೆಯ ವಾಸ್ತವ ಸ್ಥಿತಿ.

ನಿವೇಶನ ರಹಿತರೆಷ್ಟು?: ರಾಜ್ಯದಲ್ಲಿ ಸರ್ಕಾರವೇ ಗುರುತಿಸಿರುವ ಪ್ರಕಾರ 17.37 ಲಕ್ಷ ಜನ ನಿವೇಶನ ರಹಿತರಿದ್ದಾರೆ. ಅದರಲ್ಲಿ 7.10 ಲಕ್ಷ ಜನ ಗ್ರಾಮೀಣಭಾಗದವರಿದ್ದರೆ, 10.26 ಲಕ್ಷ ಜನ ನಗರ ಪ್ರದೇಶದವರು.

ಸಬ್ಸಿಡಿ ಎಷ್ಟು?

  • ಪ್ರತಿ ಮನೆಗೆ 7.50 ಲಕ್ಷ ಘಟಕ ವೆಚ್ಚ
  • ಎಸ್​ಸಿ ಎಸ್​ಟಿ ಗೆ 2 ಲಕ್ಷ ರೂ. ಸಬ್ಸಿಡಿ
  • ಸಾಮಾನ್ಯ ವರ್ಗಕ್ಕೆ 1.50 ಲಕ್ಷ ರೂ. ಸಹಾಯಧನ
ಬಡವರಿಗೆ ಸೂರು ಕಲ್ಪಿಸುವ ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ವಂತಿಗೆ ಪಾವತಿ ಆಗದೆ ಮನೆಗಳ ಹಂಚಿಕೆ ಕಷ್ಟವಾಗುತ್ತಿದೆ. ಕೇಂದ್ರದಿಂದ 1.50 ಲಕ್ಷ ರೂ. ವರೆಗೆ ಸಬ್ಸಿಡಿ ಬಂದರೂ ಜಿಎಸ್ಟಿ ರೂಪದಲ್ಲಿ 1.25 ಲಕ್ಷ ರೂ. ಕಟ್ಟುವಂತಾಗಿದೆ. ಹೀಗಾಗಿ ಫಲಾನುಭವಿಗಳ ಪಾಲಿನ ವಂತಿಗೆಯನ್ನೂ ಸರ್ಕಾರದಿಂದ ಭರಿಸುವುದು ಸಾಧ್ಯವೇ ಎಂಬ ಚಿಂತನೆ ನಡೆದಿದೆ. ಈ ಕುರಿತು ಮುಖ್ಯಮಂತ್ರಿಗಳ ಜತೆ ರ್ಚಚಿಸಲಾಗುವುದು. ವಸತಿ ಯೋಜನೆಗೆ ಜಿಎಸ್ಟಿ ವಿನಾಯ್ತಿ ಬಗ್ಗೆ ಕೇಂದ್ರಕ್ಕೂ ಮನವಿ ಸಲ್ಲಿಸಲಾಗುವುದು. | ಜಮೀರ್ ಅಹಮದ್ ಖಾನ್, ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ

ಕೇಂದ್ರಕ್ಕೆ ಮನವಿ ಏನು?: ನಗರ, ಗ್ರಾಮೀಣ ಆಶ್ರಯ, ಅಂಬೇಡ್ಕರ್ ಆವಾಸ್, ಇಂದಿರಾ ಆವಾಸ್, ಬಸವ ಯೋಜನೆ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಯೋಜನೆಗಳು, ಒಂಟಿ ಮನೆ ಹೀಗೆ ಅನೇಕ ಯೋಜನೆಗಳನ್ನು ಚಾಲ್ತಿಯಲ್ಲಿದ್ದು, ಪ್ರತಿ ವರ್ಷ 7 ಲಕ್ಷ, 8 ಲಕ್ಷ ಮನೆಗಳನ್ನು ನಿರ್ವಿುಸುವುದಾಗಿ ಸರ್ಕಾರಗಳು ಹೇಳಿಕೊಳ್ಳುತ್ತವೆ. ಆದರೆ ಮನೆಗಳು ಪೂರ್ಣವಾಗಿ ಫಲಾನುಭವಿಗಳಿಗೆ ಸಿಗುವಂತಾಗಲು ಜಿಎಸ್​ಟಿಯಲ್ಲಿ ಬಡವರ ಸೂರಿಗೆ ವಿನಾಯ್ತಿ ನೀಡುವಂತೆ ಮನವಿ ಮಾಡಲು ನಿರ್ಧರಿಸಲಾಗಿದೆ. ಮುಂದಿನ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಪ್ರಸ್ತಾಪ ಮಾಡುವಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಲಿದ್ದಾರೆ.