ನ್ಯೂಸ್

ಎರಡು ದಶಕಗಳಷ್ಟು ಹಿಂದಿನಂತಿದ್ದ ದೆಹಲಿ ಮತ್ತೆ ಮೊದಲಿನಂತಾಯ್ತು...!

ನವದೆಹಲಿ: ದೇಶಾದ್ಯಂತ ಲಾಕ್​ಡೌನ್​ನಿಂದಾಗಿ ರಾಷ್ಟ್ರ ರಾಜಧಾನಿ ಪ್ರದೇಶ (ಎನ್​ಸಿಆರ್​) ಸೇರಿ ಉತ್ತರ ಭಾರತದ ಬಹುತೇಕ ನಗರಗಳಲ್ಲಿ ಭಾರಿ ಬದಲಾವಣೆ ಕಂಡುಬಂದಿತ್ತು. ಆದರೆ, ದಿನಕಳೆದಂತೆ ಅದು ಮೊದಲಿನ ಸ್ಥಿತಿಗೆ ಮರಳುತ್ತಿದೆ. ಇದು ಪರಿಸರ ಪ್ರಿಯರಲ್ಲಿ ನಿರಾಸೆಗೂ ಕಾರಣವಾಗಿದೆ.

ದೆಹಲಿ ಸೇರಿ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ವಾತಾವರಣ ಅತ್ಯಂತ ತಿಳಿಯಾಗಿತ್ತು. ಅದರಲ್ಲೂ ಮುಖ್ಯವಾಗಿ ಗಂಗಾನದಿ ಮುಖಜ ಭೂಮಿ ವಾತಾವರಣ 20 ವರ್ಷದ ಹಿಂದಿನಂತಾಗಿತ್ತು.

ವಾಯ ಗುಣಮಟ್ಟ ಭಾರಿ ಪ್ರಮಾಣದಲ್ಲಿ ಸುಧಾರಿಸಿದ್ದು, ಗಾಳಿಯಲ್ಲಿರುವ ಮಾಲಿನ್ಯಕಾರಕಗಳ ಪ್ರಮಾಣವೂ ಎರಡು ದಶಕಗಳ ಹಿಂದಿನಷ್ಟು ಕಡಿಮೆಯಾಗಿದೆ ಎಂದು ನಾಸಾ ಹೇಳಿತ್ತು. ಜತೆಗೆ ಅವುಗಳ ನಕ್ಷೆಯನ್ನು ಬಿಡುಗಡೆ ಮಾಡಿತ್ತು.

ಆದರೆ, ಪ್ರಸ್ತುತ ಎನ್​ಸಿಆರ್​ ಪ್ರದೇಶದಲ್ಲಿ ವಾಯು ಗುಣಮಟ್ಟ ಹಿಂದಿನಂತೆ ಸಾಮಾನ್ಯ ಮಟ್ಟಕ್ಕೆ ಬಂದಿದೆ. ಪಶ್ಚಿಮದ ಒಣ ಪ್ರದೇಶದಿಂದ ಬೀಸುವ ಗಾಳಿಯಲ್ಲಿನ ಧೂಳಿನ ಕಣಗಳು ದೆಹಲಿ ವಾತಾವರಣವನ್ನು ಪ್ರವೇಶಿಸುತ್ತಿವೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಚಾಂದಿನಿ ಚೌಕ್​ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ)161 ಇತ್ತು. ಅಲ್ಲದೇ ಗಾಳಿಯಲ್ಲಿರುವ ಧೂಳಿನ ಕಣಗಳ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಎಕ್ಯುಐ 100ರ ಒಳಗಿದ್ದರೆ ಉತ್ತಮ ಅಥವಾ ತೃಪ್ತಿದಾಯಕ, 200ರವರೆಗಿದ್ದರೆ ಸಾಮಾನ್ಯ, 300ಕ್ಕಿಂತ ಕೆಳಗಿಳಿದರೆ ಕಳಪೆ ಎಂದು ವಿಂಗಡಿಸಲಾಗುತ್ತದೆ. ಲಾಕ್​ಡೌನ್​ ಮುನ್ನ ಎಕ್ಯುಐ 500ಕ್ಕೂ ಹೆಚ್ಚಾಗಿ ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿತ್ತು. ಲಾಕ್​ಡೌನ್​ನಿಂದಾಗಿ ಸುಧಾರಿಸಿದ್ದ ವಾಯು ಗುಣಮಟ್ಟ ನಿರ್ಬಂಧ ಸಡಿಲಿಕೆಯಾಗುತ್ತಿದ್ದಂತೆ ಹಿಂದಿನ ಸ್ಥಿತಿಗೆ ಮರಳುತ್ತಿದೆ.