ನ್ಯೂಸ್

ಜಲಕ್ಷಾಮ ಕುರಿತಂತೆ ಪೊಲೀಸರಿಗೆ ಪತ್ರ ಬರೆದ ಸಚಿವೆ; ಪತ್ರದಲ್ಲೇನಿದೆ?

ನವದೆಹಲಿ: ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳು ತೀವ್ರ ನೀರಿನ ಕೊರತೆಯಿಂದ ಬಳಲುತ್ತಿವೆ. ನೀರಿನ ಸಮಸ್ಯೆಯ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಒಂದೆಡೆ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ದೆಹಲಿ ಜಲ ಸಚಿವೆ ಅತಿಶಿ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ಪ್ರಮುಖ ಪೈಪ್‌ಲೈನ್‌ಗಳ ಗಸ್ತು ಮತ್ತು ಭದ್ರತೆಯನ್ನು ಹೆಚ್ಚಿಸಲು ಮನವಿ ಮಾಡಿದ್ದಾರೆ.

ಕಿಡಿಗೇಡಿಗಳು ಅಥವಾ ಜನರು ನೀರಿನ ಪೈಪ್‌ಲೈನ್‌ಗಳನ್ನು ಹಾಳು ಮಾಡುವುದನ್ನು ತಡೆಯಲು ಮುಂದಿನ 15 ದಿನಗಳ ಕಾಲ ನಮ್ಮ ಪ್ರಮುಖ ಪೈಪ್‌ಲೈನ್‌ಗಳ ಗಸ್ತು ಮತ್ತು ಭದ್ರತೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ವಿನಂತಿಸುತ್ತೇನೆ ಎಂದು ಅತಿಶಿ ಪತ್ರದಲ್ಲಿ ಬರೆದಿದ್ದಾರೆ. ದೆಹಲಿಯಲ್ಲಿ ನೀರಿನ ಸಮಸ್ಯೆಯ ನಡುವೆ ಕೆಲವರು ನೀರು ಸರಬರಾಜನ್ನು ಅಡ್ಡಿಪಡಿಸಲು ಪಿತೂರಿ ನಡೆಸುತ್ತಿದ್ದಾರೆ. ನೀರಿನ ಪೈಪ್​​ಲೈನ್ ಕಟ್ ಮಾಡುವ ಮೂಲಕ ನೀರಿನ ಬಿಕ್ಕಟ್ಟನ್ನು ಇನ್ನಷ್ಟು ಗಂಭೀರಗೊಳಿಸುವುದು ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವವರ ಉದ್ದೇಶವಾಗಿರಬಹುದು. ಈ ವಿಷಯ ಬೆಳಕಿಗೆ ಬಂದ ನಂತರ ಅವರು ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ದಕ್ಷಿಣ ದೆಹಲಿ ರೈಸಿಂಗ್ ಮುಖ್ಯ ಪೈಪ್‌ಲೈನ್‌ನಲ್ಲಿ ಗರ್ಹಿ ಮೆಂಡು ಟ್ರಾನ್ಸ್‌ಫಾರ್ಮರ್ ಬಳಿ ದೊಡ್ಡ ಸೋರಿಕೆಯನ್ನು ದೆಹಲಿ ಜಲ ಮಂಡಳಿಯ ಗಸ್ತು ತಂಡವು ಕಂಡುಹಿಡಿದಿದೆ. ಪ್ರಾಥಮಿಕ ತನಿಖೆಯಿಂದ 375 ಮಿ.ಮೀ. ಬೋಲ್ಟ್ ಮತ್ತು 12 ಇಂಚಿನ ಬೋಲ್ಟ್ ಅನ್ನು ಯಾರೋ ಕತ್ತರಿಸಿದ್ದಾರೆಂದು ತಿಳಿದು ಬಂದಿದೆ. ದೆಹಲಿಯಲ್ಲಿ ನೀರಿನ ಸಮಸ್ಯೆಯನ್ನು ಹೆಚ್ಚಿಸುವ ಸಂಚು ಇದೆ ಎಂದು ತೋರುತ್ತದೆ. ನೀರಿನ ಪೈಪ್‌ಲೈನ್ ದುರಸ್ತಿ ಮಾಡಲು ದೆಹಲಿ ಜಲ ಮಂಡಳಿಗೆ ಆರು ಗಂಟೆ ಬೇಕಾಯಿತು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಈ ನಡುವೆ ಬಿಜೆಪಿ ಪೈಪ್‌ಲೈನ್‌ನಲ್ಲಿನ ಕಳ್ಳತನ ಮತ್ತು ಸೋರಿಕೆ ಸಮಸ್ಯೆಗಳನ್ನು ಸರಿಪಡಿಸುವ ಬದಲು ಎಎಪಿ ನಾಟಕ ಮಾಡುತ್ತಿದೆ ಎಂದು ಆರೋಪಿಸಿದೆ. (ಏಜೆನ್ಸೀಸ್​​)