ನವದೆಹಲಿ: ಪತ್ನಿಯ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಆಕೆಯ ಲವರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಇಬ್ಬರು ನಕಲಿ ಮಹಿಳಾ ಆರೋಗ್ಯ ಕಾರ್ಯಕರ್ತೆಯರನ್ನು ಬಾಡಿಗೆ ಪಡೆದು ಮೂವರಿಗೆ ವಿಷವುಣಿಸಿ ಕೊಲೆಗೆ ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪ್ರದೀಪ್ (42) ಎಂದು ಗುರುತಿಸಲಾಗಿದೆ. ತನ್ನ ಪತ್ನಿಗೆ ಹೋಮ್ ಗಾರ್ಡ್ನೊಂದಿಗೆ ಅನೈತಿಕ ಸಂಬಂಧ ಇರಬಹುದೆಂಬ ಶಂಕೆ ವ್ಯಕ್ತವಾದ ಬೆನ್ನಲ್ಲೇ ಆತ ಇಬ್ಬರು ನಕಲಿ ಆರೋಗ್ಯ ಕಾರ್ಯಕರ್ತೆಯರನ್ನು ಬಾಡಿಗೆಗೆ ನೇಮಿಸಿಕೊಂಡಿದ್ದ.
ಕರೊನಾ ವೈರಸ್ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪರೀಕ್ಷೆ ನಡೆಸುವುದನ್ನೇ ದುರುಪಯೋಗಪಡಿಸಿಕೊಂಡು ಆರೋಪಿ ಪ್ರದೀಪ್, ನಕಲಿ ಆರೋಗ್ಯ ಕಾರ್ಯಕರ್ತೆಯರನ್ನು ಭಾನುವಾರ ಉತ್ತರ ದೆಹಲಿ ಅಲಿಪುರದಲ್ಲಿರುವ ಲವರ್ ಹೋಮ್ಗಾರ್ಡ್ ನಿವಾಸಕ್ಕೆ ಕಳುಹಿಸಿದ್ದ.
ಮನೆಗೆ ತೆರಳಿದ ನಕಲಿ ಆರೋಗ್ಯ ಕಾರ್ಯಕರ್ತೆಯರು ಸಂತ್ರಸ್ತನ ಮೂವರು ಕುಟುಂಬ ಸದಸ್ಯರಿಗೆ ವಿಷ ತುಂಬಿದ ಬಾಟಲ್ ನೀಡಿದ್ದಾರೆ. ಬಳಿಕ ಇದು ಕರೊನಾ ತಡೆಗಟ್ಟುವ ಔಷಧ ಎಂದು ಹೇಳಿದ್ದಾರೆ. ಅದನ್ನೇ ನಂಬಿಕೊಂಡ ಹೋಮ್ಗಾರ್ಡ್ ಕುಟುಂಬ ಏನೋ ಯೋಚಿಸಿದೇ ಕುಡಿದಿದ್ದಾರೆ. ತಕ್ಷಣ ಅನಾರೋಗ್ಯಕ್ಕೀಡಾದ ಅವರು ಸ್ಥಳೀಯ ಆಸ್ಪತ್ರೆಗೆ ಧಾವಿಸಿದ್ದಾರೆ. ಚಿಕಿತ್ಸೆ ಪಡೆದುಕೊಂಡಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ವೇಳೆ ಸಿಸಿಟಿವಿ ಫುಟೇಜ್ ಮೂಲಕ ಆರೋಪಿ ಮಹಿಳೆಯರಿಬ್ಬರನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ. ವಿಚಾರಿಸಿದಾಗ ಹಣವನ್ನು ನೀಡಿ ನಮ್ಮನ್ನು ಕೃತ್ಯ ಎಸಗಲು ಬಾಡಿಗೆ ಪಡೆದದ್ದಾಗಿ ಬಹಿರಂಗ ಪಡಿಸಿದ್ದಾರೆ. ತಕ್ಷಣ ಆರೋಪಿ ಪ್ರದೀಪ್ನನ್ನು ಸಹ ಬಂಧಿಸಲಾಯಿತು. ಸಂಬಂಧಿಸಿದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು. (ಏಜೆನ್ಸೀಸ್)