ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿನ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ಖಂಡಿಸಿದ ಅವರು ಇದು ಅತ್ಯಂತ ದುರದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ಇದನ್ನು ಓದಿ: UPSC ಕೋಚಿಂಗ್ ಸೆಂಟರ್ನಲ್ಲಿ ಮೃತಪಟ್ಟ ಮೂವರು ವಿದ್ಯಾರ್ಥಿಗಳು ಯಾರು ಗೊತ್ತಾ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
ಓಲ್ಡ್ ರಾಜೇಂದ್ರ ನಗರದಲ್ಲಿನ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಜಲಾವೃತಗೊಂಡ ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಶನಿವಾರ (ಜುಲೈ 27) ಮೃತಪಟ್ಟಿದ್ದಾರೆ. ಈ ವಾರದ ಆರಂಭದಲ್ಲಿ ಮತ್ತೋರ್ವ ಅಭ್ಯರ್ಥಿ ನೀರಿನ ಪ್ರವಾಹದಿಂದಾಗಿ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದರು.
ಘಟನೆಯ ಕುರಿತು ವರದಿ ಸಲ್ಲಿಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಭಾನುವಾರ ವಿಭಾಗೀಯ ಆಯುಕ್ತರಿಗೆ ಸೂಚಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಘಟನೆಯು ಕ್ರಿಮಿನಲ್ ನಿರ್ಲಕ್ಷ್ಯ ಮತ್ತು ಸಂಬಂಧಪಟ್ಟ ಏಜೆನ್ಸಿಗಳ ಕಡೆಯಿಂದ ಮೂಲ ನಿರ್ವಹಣೆ ಕೊರತೆಯನ್ನು ಸೂಚಿಸುತ್ತದೆ. ಈ ನಿರ್ಲಕ್ಷ್ಯಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಆಡಳಿತದ ನಿರಾಸಕ್ತಿ ಮತ್ತು ಕೋಚಿಂಗ್ ಸಂಸ್ಥೆಗಳನ್ನು ನಡೆಸುತ್ತಿರುವವರ ಕ್ರಿಮಿನಲ್ ದುಷ್ಕೃತ್ಯದಿಂದಾಗಿ ಕಳೆದುಹೋದ ಅಮೂಲ್ಯವಾದ ಯುವ ಜೀವನವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಘಟನೆಗಳು ಸಂಬಂಧಪಟ್ಟ ಏಜೆನ್ಸಿಗಳು ಮತ್ತು ಇಲಾಖೆಗಳ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ನಗರದಲ್ಲಿ ನೀರು ಹರಿಸಲು ಮತ್ತು ಅದನ್ನು ನಿಭಾಯಿಸಲು ಮಾಡಿದ ಪ್ರಯತ್ನಗಳು ನೆಲಕಚ್ಚಿವೆ. ಈ ಘಟನೆಯು ಕಳೆದ ದಶಕ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ದೆಹಲಿಯಲ್ಲಿನ ದುರಾಡಳಿತವನ್ನು ಸೂಚಿಸುತ್ತದೆ ಎಂದಿದ್ದಾರೆ. ಏನು ನಡೆದಿದೆ ಎಂಬುದು ಕ್ಷಮಿಸಲಾಗದು ಮತ್ತು ಅಂತಹ ಸಮಸ್ಯೆಗಳನ್ನು ಇನ್ನು ಮುಂದೆ ನಿರ್ಲಕ್ಷಿಸಲಾಗುವುದಿಲ್ಲಎಂದು ಸಕ್ಸೇನಾ ಹೇಳಿದರು. (ಏಜೆನ್ಸೀಸ್)