ನ್ಯೂಸ್

ಕೊವಿಡ್​-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ದೆಹಲಿ ಆರೋಗ್ಯ ಸಚಿವರ ಸ್ಥಿತಿ ಗಂಭೀರ...

ನವದೆಹಲಿ: ಕೊವಿಡ್​-19 ಸೋಂಕಿಗೆ ಒಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಶುಕ್ರವಾರ ಅವರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಕಳೆದ 24 ಗಂಟೆಗಳಿಂದಲೂ ಅವರಿಗೆ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ದೇಹದ ಉಷ್ಣವೂ ಸಹಜ ಸ್ಥಿತಿಗೆ ಬಂದಿದೆ. ಜ್ವರ ಇಲ್ಲ ಎಂದು ಸಚಿವರು ದಾಖಲಾಗಿರುವ ಮ್ಯಾಕ್ಸ್​ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಲಸೆ ಕಾರ್ಮಿಕರ ಮುಖದಲ್ಲಿ ನಗು ಮೂಡಿಸಿದ ಕೇಂದ್ರ; ಮಹತ್ವದ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ವಿಪರೀತ ಜ್ವರದಿಂದ ಬಳಲುತ್ತಿದ್ದ ಸತ್ಯೇಂದ್ರ ಜೈನ್ ಅವರನ್ನು ಮೊದಲು ಪೂರ್ವ ದೆಹಲಿಯ ರಾಜೀವ್​ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಶುಕ್ರವಾರ (ನಿನ್ನೆ) ಅಲ್ಲಿಂದ ಮ್ಯಾಕ್ಸ್​ಗೆ ಕರೆದುಕೊಂಡು ಹೋಗಲಾಗಿತ್ತು.

ಸತ್ಯೇಂದ್ರ ಜೈನ್​ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ನಿರಂತರವಾಗಿ ಆಕ್ಸಿಜನ್​ ನೀಡಲಾಗುತ್ತಿತ್ತು. ಇದರ ಹೊರತಾಗಿಯೂ ಅವರಲ್ಲಿನ ನ್ಯುಮೊನಿಯಾ ಉಲ್ಬಣಗೊಂಡು, ಶ್ವಾಸಕೋಶದ ಸೋಂಕು ಹೆಚ್ಚಾಯಿತು. ನಂತರ ಸತ್ಯೇಂದ್ರ ಜೈನ್​ ಅವರಿಗೆ ತಲೆ ಸುತ್ತು, ಸುಸ್ತು ಕಾಣಿಸಿಕೊಂಡಿತು. ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ತಿಳಿಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್​​ನಲ್ಲೇ ವಕ್ಕರಿಸಿದೆ ಕರೊನಾ…ಒಳಚರಂಡಿಯ ತ್ಯಾಜ್ಯದಲ್ಲಿ ಅಡಗಿ ಕುಳಿತಿತ್ತು !

55ವರ್ಷದ ಸತ್ಯೇಂದ್ರ ಜೈನ್​ ಅವರಲ್ಲಿ ನ್ಯುಮೊನಿಯಾ ಇತ್ತು. ಜೂನ್​ 17ರಂದು ಕೊವಿಡ್​-19 ದೃಢಪಟ್ಟಿತ್ತು. ಸದ್ಯ ಅವರ ಖಾತೆಯ ಹೊಣೆಯನ್ನು ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರೇ ಹೊತ್ತಿದ್ದಾರೆ. (ಏಜೆನ್ಸೀಸ್)