ನ್ಯೂಸ್

ಸುಪ್ರೀಂಕೋರ್ಟ್ ಎಚ್ಚರಿಕೆ ಬೆನ್ನಲ್ಲೇ ತ್ವರಿತ ರೈಲು ಯೋಜನೆಗೆ 415 ಕೋಟಿ ರೂ. ಬಿಡುಗಡೆಗೊಳಿಸಿದ ದೆಹಲಿ ಸರ್ಕಾರ!

ನವದೆಹಲಿ: ಸುಪ್ರೀಂಕೋರ್ಟ್​ ನೀಡಿದ ಎಚ್ಚರಿಕೆಯ ಬೆನ್ನಲ್ಲೇ ದೆಹಲಿ ಸರ್ಕಾರ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (RRTS) ಯೋಜನೆಗಾಗಿ 415 ಕೋಟಿ ರೂ. ಪಾವತಿಯನ್ನು ಎನ್‌ಸಿಆರ್‌ಟಿಸಿಗೆ ಬಿಡುಗಡೆಗೊಳಿಸಿದೆ ಎಂದು ದೆಹಲಿಯ ಸಾರಿಗೆ ಸಚಿವರಾದ ಕೈಲಾಶ್ ಗಹ್ಲೋಟ್ ಶುಕ್ರವಾರ (ನ.24) ಹೇಳಿದ್ದಾರೆ.

ವಾರದ ಆರಂಭದಲ್ಲಿ ಅಲ್ವಾರ್ ಮತ್ತು ಪಾಣಿಪತ್‌ಗೆ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಕಾರಿಡಾರ್‌ಗಳಿಗೆ ಹಣವನ್ನು ನೀಡದಿದ್ದಕ್ಕಾಗಿ ಸುಪ್ರೀಂಕೋರ್ಟ್ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಉಳಿಸಿಕೊಂಡ ಬಾಕಿಯನ್ನು ಒಂದು ವಾರದೊಳಗೆ ಪಾವತಿಸದಿದ್ದರೆ ಜಾಹೀರಾತುಗಳಿಗಾಗಿ ಸರ್ಕಾರ ನಿಗದಿಪಡಿಸಿದ ಹಣವನ್ನು ಈ ಯೋಜನೆಗೆ ವರ್ಗಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿತು. ಇದರ ಬೆನ್ನಲ್ಲೇ ಈ ಬೆಳವಣಿಗೆ ಇದೀಗ ಮುನ್ನೆಲೆಗೆ ಬಂದಿದೆ.

"ಇಂದು ಸಾರಿಗೆ ಇಲಾಖೆಯು ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆಗೆ (NCRTC) 415 ಕೋಟಿ ರೂ. ಪಾವತಿಸಿದೆ" ಎಂದು ಗಹ್ಲೋಟ್ ಹೇಳಿದರು. ಕೆಲವು ತಿಂಗಳ ಹಿಂದೆಯಷ್ಟೇ ಸರ್ಕಾರ ಮೊದಲ ಕಂತಿನ 80 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿತ್ತು ಎಂದು ಹೇಳಲಾಗಿದೆ.

ಆರ್‌ಆರ್‌ಟಿಎಸ್ ಯೋಜನೆಯು ದೆಹಲಿಯಿಂದ ಉತ್ತರಪ್ರದೇಶದ ಮೀರತ್, ರಾಜಸ್ಥಾನದ ಅಲ್ವಾರ್ ಮತ್ತು ಹರಿಯಾಣದ ಪಾಣಿಪತ್‌ಗೆ ಸಂಪರ್ಕಿಸುವ ಸೆಮಿ-ಹೈ-ಸ್ಪೀಡ್ ರೈಲು ಕಾರಿಡಾರ್‌ಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ. ನಗರ ಸರ್ಕಾರವು ಉಲ್ಲೇಖಿಸಿದ ಬಜೆಟ್ ನಿರ್ಬಂಧಗಳನ್ನು ಸುಪ್ರೀಂಕೋರ್ಟ್ ಈ ಹಿಂದೆ ಒಪ್ಪಿಕೊಂಡಿತ್ತು. ಆದ್ರೆ, ಅದೇ ಸಮಯದಲ್ಲಿ ಅಂತಹ ರಾಷ್ಟ್ರೀಯ ಯೋಜನೆಗಳ ಮೇಲೆ ಪರಿಣಾಮ ಬೀರಿದರೆ ಮತ್ತು ಜಾಹೀರಾತುಗಳಿಗೆ ಹಣವನ್ನು ಖರ್ಚು ಮಾಡಿದರೆ, ಆ ಹಣವನ್ನು ಈ ಯೋಜನೆಗೆ ವರ್ಗಾಯಿಸಲು ನಿರ್ದೇಶಿಸುವುದನ್ನು ತಡೆಯುವುದಿಲ್ಲ ಎಂದು ಎಚ್ಚರಿಸಿತ್ತು.

ಆರ್‌ಆರ್‌ಟಿಎಸ್ ಯೋಜನೆಯನ್ನು ಎನ್‌ಸಿಆರ್‌ಟಿಸಿ ಕಾರ್ಯಗತಗೊಳಿಸುತ್ತಿದ್ದು, ಇದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಜಂಟಿ ಉದ್ಯಮವಾಗಿದೆ,(ಏಜೆನ್ಸೀಸ್).