ನವದೆಹಲಿ: ಕರೊನಾ ಸೋಂಕು ತಡೆಗಟ್ಟಲು ದೆಹಲಿಯಲ್ಲಿ ಎಲ್ಲ ಖಾಸಗಿ ಹಾಗೂ ಸರ್ಕಾರಿ ಶಾಲೆಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತಿಳಿಸಿದ್ದಾರೆ.
ಟ್ಟಿಟ್ಟರ್ನಲ್ಲಿ ಈ ವಿಷಯ ಪ್ರಕಟಿಸಿರುವ ಅವರು, ನಾಲ್ಕನೇ ಹಂತದ ಕರೊನಾವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಅನಿವಾರ್ಯವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಏಪ್ರಿಲ್ 17 ರವರೆಗೆ ಈಗಾಗಲೇ ದೆಹಲಿಯಲ್ಲಿನ ಎಲ್ಲ ಕಾಲೇಜು ಹಾಗೂ ಕೋಚಿಂಗ್ ಸೆಂಟರ್ಗಳನ್ನು ಮುಚ್ಚಲು ಆದೇಶಿಸಲಾಗಿತ್ತು. ಮುಂದುವರೆದು ಶಾಲೆಗಳನ್ನೂ ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು, ನಾಲ್ಕನೇ ಹಂತದ ಕರೊನಾ ಅಲೆ ತಡೆಗಟ್ಟಲು ಎಲ್ಲ ಯುವಕರಿಗೂ ಲಸಿಕೆ ನೀಡಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಏತನ್ಮದ್ಯೆ ದೆಹಲಿಯಲ್ಲಿ ಗುರುವಾರದ ಅಂತ್ಯಕ್ಕೆ 7437 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, 24 ಜನ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಒಟ್ಟು ಮಾರಕ ಕರೊನಾಕ್ಕೆ ಇದುವರೆಗೆ 11157 ಜನ ಮೃತಪಟ್ಟಿದ್ದಾರೆ.