ನ್ಯೂಸ್

ವಿಳಂಬ ಧೋರಣೆ ಸಲ್ಲದು; ಜಟಿಲ ಇ-ಖಾತಾ ವ್ಯವಸ್ಥೆಯನ್ನು ತಕ್ಷಣ ಸರಳಗೊಳಿಸಿ

Webdesk - Manjunatha B

ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ತಲೆದೋರಿರುವ ಇ-ಖಾತಾ ಸಮಸ್ಯೆಯು ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುವುದರ ಜತೆಗೆ ರಾಜಸ್ವ ಸಂಗ್ರಹಕ್ಕೂ ತೊಂದರೆಯನ್ನು ಉಂಟುಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಚಿಕ್ಕಮಗಳೂರು, ಹಾಸನ, ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣಕನ್ನಡ ಸೇರಿದಂತೆ ರಾಜ್ಯ ನಾನಾ ಜಿಲ್ಲೆಗಳಲ್ಲಿ ಇ-ಖಾತಾ ವಿತರಿಸುವಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಸ್ಥಿರಾಸ್ತಿ ವಹಿವಾಟು ಅಕ್ರಮಕ್ಕೆ ಅಂಕುಶ ಹಾಕುವುದು ಹಾಗೂ ನಕಲಿ ನೋಂದಣಿ ನಿಯಂತ್ರಿಸುವುದು ಇ-ಖಾತಾ ಕಡ್ಡಾಯದ ಮುಖ್ಯ ಉದ್ದೇಶ ಎಂಬುದೇನೋ ಒಪ್ಪಬಹುದಾದ ವಾದ. ನಕಲಿ ಖಾತಾ ಬಳಸಿ ನಕಲು ವಹಿವಾಟುಗಳನ್ನು ತಪ್ಪಿಸಬೇಕೆಂಬುದು ಸರ್ಕಾರದ ಸದುದ್ದೇಶ ನಿಜ.

ಆದರೆ ಯಾವುದೇ ಪೂರ್ವ ತಯಾರಿ ಇಲ್ಲದೆ, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಸಾಕಷ್ಟು ತರಬೇತಿಯೂ ಇಲ್ಲದೆ ಇ-ಖಾತಾ ವ್ಯವಸ್ಥೆಯನ್ನು ಸರ್ಕಾರ ಜಾರಿ ಮಾಡಿದ್ದೇ ಜನರು ಪರದಾಡುವಂತಾಗಲು ಮುಖ್ಯ ಕಾರಣವಾಯಿತು. ಬೇಕಾದ ದಾಖಲೆ ಯಾವುದು, ಯಾವ ವಿಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಜಾರಿ ಮಾಡಬಹುದು ಎಂಬುದನ್ನು ಜಾರಿಗೆ ಮೊದಲೇ ಆಲೋಚಿಸಬೇಕಿತ್ತು.

ಜನರಿಗೆ ಸಮಸ್ಯೆ ಉಂಟಾಗಿರುವು ದರ ಬಗ್ಗೆ ಮಾಧ್ಯಮಗಳಲ್ಲಿ ವಿಸõತ ವರದಿಗಳು ಪ್ರಕಟವಾದ ಬಳಿಕ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ವಿವಿಧ ನಾಯಕರುಗಳಿಂದ ಟೀಕೆ ವ್ಯಕ್ತವಾದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತು. ಸಮಸ್ಯೆ ಪರಿಹರಿಸಲು ಕೆಲವು ಹಿರಿಯ ಸಚಿವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಆ ಉನ್ನತ ಮಟ್ಟದ ಸಮಿತಿಯ ಮೇಲೆ ಜನರು ಅಪಾರ ಭರವಸೆ ಇಟ್ಟುಕೊಂಡಿದ್ದರು. ಸಮಸ್ಯೆ ಕೂಡಲೇ ಬಗೆಹರಿಯುವಂತಹ ಪರಿಹಾರವೊಂದನ್ನು ಸಚಿವರ ಸಮಿತಿ ಸೂಚಿಸಬಹುದು ಎಂದುಕೊಂಡಿದ್ದರು. ಆದರೆ ಜನರ ನಿರೀಕ್ಷೆ ಹುಸಿಯಾಗಿದೆ. ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ರಹೀಂ ಖಾನ್ ಅವರ ಸಮ್ಮುಖದಲ್ಲಿ ಬುಧವಾರ ಬಹುನಿರೀಕ್ಷಿತ ಸಭೆ ನಡೆದಿದೆ. ತಕ್ಷಣದ ಪರಿಹಾರ ಕಂಡುಹಿಡಿಯಲು ಆ ಸಭೆಗೆ ಸಾಧ್ಯವಾಗಿಲ್ಲ ಎಂಬುದು ದುರದೃಷ್ಟಕರ. ಇಡೀ ಸಮಸ್ಯೆ ಬಗ್ಗೆ ರ್ಚಚಿಸಿ ಸರ್ಕಾರಕ್ಕೆ ಸಲಹೆ ನೀಡಲು ಜಂಟಿ ಕಾರ್ಯಪಡೆಯೊಂದನ್ನು ರಚಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ವರದಿ ನೀಡುವುದಕ್ಕೆ ಎರಡು ತಿಂಗಳು ಸಮಯ ನೀಡಲಾಗಿದೆ. ಇದರಿಂದಾಗಿ ಇ-ಖಾತಾ ಸಮಸ್ಯೆಗೆ ಇನ್ನೆರಡು ತಿಂಗಳು ಪರಿಹಾರ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿದೆ. ಇ-ಸ್ವತ್ತು, ಇ-ವಿನ್ಯಾಸ ಹಾಗೂ ಇ-ಆಸ್ತಿ ಇವುಗಳನ್ನು ಅಧ್ಯಯನ ಮಾಡುವುದಕ್ಕೆ ಸಮಿತಿಗೇ ಎರಡು ತಿಂಗಳು ಬೇಕಾಗಬಹುದೆಂಬ ಅಂದಾಜು ಸರ್ಕಾರಕ್ಕೆ ಇರುವುದಾದರೆ, ಇವುಗಳನ್ನು ತರಾತುರಿಯಲ್ಲಿ ಜನರ ಮೇಲೆ ಮತ್ತು ಅಧಿಕಾರಿಗಳ ಮೇಲೆ ಹೇರಿದ್ದೇಕೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವುದು ಒಂದೆಡೆ ಇರಲಿ, ಸದ್ಯಕ್ಕೆ ಇ-ಖಾತಾ ವಿತರಣೆ ಪ್ರಕ್ರಿಯೆ ಸುಗಮಗೊಳಿಸಲು, ಈಗಿರುವ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಈ ಕಾರ್ಯಪಡೆಯಿಂದ ಮಧ್ಯಂತರ ವರದಿಯನ್ನು ಆದಷ್ಟು ಶೀಘ್ರ ತರಿಸಿಕೊಳ್ಳಲು ಮುಂದಾಗಬೇಕಿದೆ.