ನ್ಯೂಸ್

ಹೆರಿಗೆ ಮಾಡಲು ವಿಳಂಬ; ಶಿಶು ಸಾವು, ಚೀಲದಲ್ಲಿ ಶವ ತೆಗೆದುಕೊಂಡು ಡಿಸಿ ಕಚೇರಿಗೆ ಬಂದ ತಂದೆ; ಆಸ್ಪತ್ರೆಗೆ ಬೀಗ ಹಾಕಿದ ಡಿಸಿ|DC

DC: ಆಸ್ಪತ್ರೆಯೊಂದರಲ್ಲಿ ಹೆರಿಗೆ ಮಾಡಲು ಸತಾಯಿಸಿದ ಹಿನ್ನೆಲೆ ನವಜಾತು ಶಿಶು ಸಾವನ್ನಪ್ಪಿದ್ದು, ಚೀಲದಲ್ಲಿ ಶವ ತೆಗೆದುಕೊಂಡು ತಂದೆ ಜಿಲ್ಲಾಧಿಕಾರಿ ಕಚೇರಿಗೆ ಬಂದ ಘಟನೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ ಎಂದು ಶನಿವಾರ (ಆಗಸ್ಟ್ 23) ವರದಿಯಾಗಿದೆ.

ಆಸ್ಪತ್ರೆಯ ಸಿಬ್ಬಂದಿ ಹೆರಿಗೆ ಮಾಡದೇ ತಾಸು ತಾಸಿಗೆ ಹೆರಿಗೆಯ ಶುಲ್ಕವನ್ನು ಹೆಚ್ಚಿಸುತ್ತಿದರು. ಮತ್ತು ಹೆರಿಗೆ ಮಾಡದೇ ವಿಳಂಬ ಮಾಡಿದ್ದರಿಂದ ಶಿಶು ಸಾವನ್ನಪ್ಪಿದೆ ಎನ್ನಲಾಗಿದೆ. ಲಖೀಂಪುರ್ ಜಿಲ್ಲಾಧಿಕಾರಿ ಹೆರಿಗೆ ವಿಳಂಬ ಮಾಡಿದ ಆಸ್ಪತ್ರೆಯನ್ನು ಸೀಲ್​ ಮಾಡಿದ್ದು, ಅಲ್ಲಿದ್ದ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಡಿಸಿ ಕಚೇರಿ, "ನವಜಾತ ಶಿಶುವಿನ ಮರಣದ ಪ್ರಕರಣದಲ್ಲಿ ಜಿಲ್ಲಾಡಳಿತವು ಗೋಲ್ಡರ್ ಆಸ್ಪತ್ರೆಯನ್ನು ಸೀಲ್ ಮಾಡಿದೆ. ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಡಿಸಿ ಸೂಚನೆಯ ಮೇರೆಗೆ, ಎಡಿಎಂ ಎಕೆ ರಾಸ್ಟೋಗಿ ಅವರು ಸೃಜನ್ ಆಸ್ಪತ್ರೆಗೆ ಭೇಟಿ ನೀಡಿ, ಗರ್ಭಿಣಿಯ ಸ್ಥಿತಿಯ ಬಗ್ಗೆ ವಿಚಾರಣೆ ನಡೆಸಿದರು. ಉತ್ತಮ ಚಿಕಿತ್ಸೆಗಾಗಿ ಸೂಚನೆಗಳನ್ನು ನೀಡಲಾಗಿದೆ. ಜಿಲ್ಲಾಡಳಿತವು ಪೀಡಿತ ಕುಟುಂಬದ ಜೊತೆಗಿದೆ" ಎಂದಿದ್ದಾರೆ.

ಮೃತ ಶಿಶು ತಂದೆ ವಿಪಿನ್ ಗುಪ್ತಾ ಎಎನ್ಐ ಜೊತೆ ಮಾತನಾಡಿದ್ದು, ನಾರ್ಮಲ್ ಡೆಲಿವರಿಗೆ 10,000 ರೂ. ಮತ್ತು ಸಿಸೇರಿಯನ್ ಡೆಲಿವರಿಗೆ 12,000 ರೂ. ಶುಲ್ಕ ಕೇಳಿದರು. ಹೆಂಡತಿಯ ಹೆರಿಗೆ ನೋವು ತೀವ್ರವಾದಂತೆ ಆಸ್ಪತ್ರೆಯು ಶುಲ್ಕವನ್ನು ಹೆಚ್ಚಿಸಿತು ಎಂದು ಅವರು ಆರೋಪಿಸಿದರು. ರಾತ್ರಿ 2.30ರ ವೇಳೆಗೆ ಹಣ ಜೋಡಿಸಿದೆ, ಮೊದಲು ಹೆರಿಗೆ ಮಾಡಿ ನಾನು ಹಣ ಕಟ್ಟುತ್ತೇನೆ ಎಂದರು ಇಲ್ಲ, ಮೊದಲು ಹಣ ಕಟ್ಟಿ ಆಮೇಲೆ ಹೆರಿಗೆ ಮಾಡುತ್ತೇವೆ ಎಂದು ಸಿಬ್ಬಂದಿ ಹೇಳಿದರು ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)