ನ್ಯೂಸ್

ಕೇಂದ್ರ ರಕ್ಷಣಾ ಇಲಾಖೆ ಕಾರ್ಯದರ್ಶಿಗೆ ಕರೊನಾ ವೈರಸ್ ಸೋಂಕು

ನವದೆಹಲಿ: ಇಲ್ಲಿಯ ಸೌತ್ ಬ್ಲಾಕ್ ನಲ್ಲಿರುವ ಕೇಂದ್ರ ರಕ್ಷಣಾ ಇಲಾಖೆy ಕಾರ್ಯದರ್ಶಿ ಅಜಯ್​​ಕುಮಾರ್ ಗೆ ಕರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

ಕೇರಳ ಕೇಡರ್​​​ನ 1985 ರ ಬ್ಯಾಚ್ ನ ಐಎಎಸ್ ಅಧಿಕಾರಿ ಅಜಯ್ ಕುಮಾರ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿರುವ ಸಂಗತಿ ಸೌತ್ ಬ್ಲಾಕ್​​​ನಲ್ಲಿ ಆಘಾತವನ್ನುಂಟು ಮಾಡಿದ್ದು, ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಹಾಗೂ ಮಿಲಿಟರಿ ಮತ್ತು ನಾಗರಿಕ ಸೇವೆಯ ಅಧಿಕಾರಿಗಳು ಕಚೇರಿಗೆ ಹಾಜರಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಸೌತ್ ಬ್ಲಾಕ್​​​​ನಲ್ಲಿ ವ್ಯಾಪಕ ಸಂಪರ್ಕ ಪತ್ತೆ ಮತ್ತು ಕಚೇರಿಗಳಲ್ಲಿ ನೈರ್ಮಲ್ಯೀಕರಣ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ ಅಜಯ್​​ಕುಮಾರ್ ಅವರೊಂದಿಗೆ ನಿಕಟ ಸಂಪರ್ಕಕ್ಕೆ ಬಂದ ಅಂದಾಜು 30 ಜನರ ಪಟ್ಟಿ ಇದೆ. ಸ್ವಯಂ ಕ್ವಾರಂಟೈನ್​​ಗೆ ಹೋಗಲು ಅವರಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಯದರ್ಶಿಗೆ ಸೋಂಕಿನ ಹಿನ್ನೆಲೆಯಲ್ಲಿ ಕಚೇರಿಯಿಂದ ಅನೇಕ ಹಿರಿಯ ಅಧಿಕಾರಿಗಳು ದೂರವೇ ಉಳಿದಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ನಿನ್ನೆ, ಮೊನ್ನೆ ಕಚೇರಿಗೆ ಭೇಟಿ ನೀಡಿಲ್ಲ. ಅವರು ಸ್ವಯಂ ಕ್ವಾರಂಟೈನ್​​ನಲ್ಲಿಯೂ ಇರಲಿಲ್ಲ ಎಂದು ಹೇಳಲಾಗಿತ್ತು.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಅಜಯ್​​ಕುಮಾರ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಐಎಎಸ್ ಅಧಿಕಾರಿಯಾಗಿದ್ದರು.

ಭೂಸೇನೆ ಮತ್ತು ನೌಕಾ ಸೇನೆ ಮುಖ್ಯಸ್ಥರ ಕಚೇರಿಗಳೂ ಸೌತ್ ಬ್ಲಾಕ್ ನಲ್ಲೇ ಇವೆ.

ಡಿಫೆನ್ಸ್ ಸ್ಟಾಫ್ ಚೀಫ್ ಜನರಲ್ ಬಿಪಿನ್ ರಾವತ್ ಅವರ ಕಚೇರಿ ಕೂಡ ಸೌತ್ ಬ್ಲಾಕ್ ಬೇಸ್ ಮೆಂಟ್ ನಲ್ಲಿದೆ.