ನ್ಯೂಸ್

ಸಪ್ಲೈಯರ್ ಜತೆ ಲಗೋರಿ ಹುಡುಗಿ; ನಿಶ್ಚಿತ್‌ಗೆ ನಾಯಕಿಯಾಗಿ ದೀಪಿಕಾ ಆರಾಧ್ಯ ನಟನೆ

ಬೆಂಗಳೂರು:‘ಗಂಟುಮೂಟೆ’ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಿಶ್ಚಿತ್ ಕೊರೋಡಿ ಬಳಿಕ ‘ಟಾಮ್ ಆ್ಯಂಡ್ ಜೆರ್ರಿ’ ಚಿತ್ರದಲ್ಲಿ ಮಿಂಚಿದ್ದರು. ಇದೀಗ ಅವರು ನಟಿಸಿರುವ ಮತ್ತೊಂದು ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ಸಿನಿಮಾ ಹೆಸರು ‘ಸಪ್ಲೈಯರ್ ಶಂಕರ’.

ರಂಜಿತ್ ಸಿಂಗ್ ರಜಪೂತ್ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬಿಜಿಯಾಗಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಬಾರ್ ಸಪ್ಲೈಯರ್ ಸುತ್ತ ಸುತ್ತವ ಕಥೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

‘ಸಪ್ಲೈಯರ್ ಶಂಕರ’ನಿಗೆ ಜೋಡಿಯಾಗಿ ‘ಲಗೋರಿ’ ಹುಡುಗಿ ದೀಪಿಕಾ ಆರಾಧ್ಯ ನಟಿಸಿದ್ದಾರೆ. ಜತೆಗೆ ಗೋಪಾಲ್ ದೇಶಪಾಂಡೆ, ಜ್ಯೋತಿ ರೈ, ನವೀನ್ ಡಿ. ಪಡೀಲ್ ಪ್ರಮುಖ ತಾರಾಗಣದಲ್ಲಿದ್ದಾರೆ. ರವಿ ಬಸ್ರೂರ್ ಬಳಿ ಕೆಲಸ ಮಾಡಿ ಅನುಭವ ಪಡೆದಿರುವ ಆರ್.ಬಿ. ಭರತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಉಳಿದಂತೆ ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್ ಛಾಯಾಗ್ರಹಣ ಹಾಗೂ ಬಾಲಾಜಿ ಕಲಾನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ. ಇದೇ ವರ್ಷದಂತ್ಯಕ್ಕೆ ‘ಸಪ್ಲೈಯರ್ ಶಂಕರ’ ತೆರೆಗೆ ಬರುವ ನಿರೀಕ್ಷೆಯಿದೆ.