ನ್ಯೂಸ್

ರೈಲಿನಲ್ಲಿ 900 ಕಿ.ಮೀ ಪ್ರಯಾಣಿಸಿದ ಶವ!

ಉತ್ತರಪ್ರದೇಶ: ಅಮೃತಸರಕ್ಕೆ ಸಂಚರಿಸುತ್ತಿದ್ದ ಜನಸೇವಾ ಎಕ್ಸ್​​ಪ್ರೆಸ್​ ರೈಲಿನ ಶೌಚಾಲಯದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ರೈಲು ಬಿಹಾರದಿಂದ ಅಮೃತಸರಕ್ಕೆ ತೆರಳುತ್ತಿತ್ತು. ರೋಜಾ ರೈಲು ನಿಲ್ದಾಣ ತಲುಪುತ್ತಿದ್ದಂತೆ ಹೆಣ ಇರುವುದು ಪತ್ತೆಯಾಗಿದೆ.

ರೈಲಿನ ಪ್ರಯಾಣಿಕರು ಆರಂಭದಿಂದಲೇ ಶೌಚಾಲಯದಿಂದ ಕೊಳೆತ ವಾಸನೆ ಬರುತ್ತಿದೆ ಎಂದು ಹೇಳುತ್ತಿದ್ದರು. ಆದರೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸಿರಲಿಲ್ಲ. ರೈಲು ಸುಮಾರು 900 ಕಿ.ಮೀ ಪ್ರಯಾಣಿಸಿದ ನಂತರ ದುರ್ವಾಸನೆ ಹೆಚ್ಚಾಗುತ್ತಿದ್ದಂತೆ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಎಚ್ಚೆತ್ತ ಜಿಆರ್‌ಪಿ ಸಿಬ್ಬಂದಿಗಳು ಶೌಚಾಲಯದ ಬಾಗಿಲು ತೆರೆದು ಪರಿಶೀಲಿಸಿದ್ದಾರೆ. ಈ ವೇಳೆ ಕೊಳೆತ ಸ್ಥಿತಿಯಲ್ಲಿರುವ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವ್ಯಕ್ತಿ ಸಾವನ್ನಪ್ಪಿ ಕನಿಷ್ಠ ಮೂರು ದಿನಗಳಾಗಿದ್ದು, ಕೊಳೆಯಲು ಪ್ರಾರಂಭವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ವ್ಯಕ್ತಿಯನ್ನು ಪರಿಶೀಲಿಸಿದಾಗ ಯಾವುದೇ ಗುರುತಿನ ಚೀಟಿ ಪತ್ತೆಯಾಗಿಲ್ಲ. ಶೌಚಾಲಯದ ಒಳಭಾಗದಿಂದ ಬಾಗಿಲು ಲಾಕ್ ಆಗಿತ್ತು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಆದರೆ ದೈಹಿಕವಾಗಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಈ ಬಗ್ಗೆ ಇತರೆ ಜಿಆರ್​ಪಿ ವಿಭಾಗಗಳಿಗೆ ಮಾಹಿತಿ ನೀಡಲಾಗಿದೆ. ತನಿಖೆ ಮುಂದುವರಿಸಲಾಗುವುದು ಎಂದು ಜಿಆರ್​​ಪಿ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)