ನ್ಯೂಸ್

ಜಾರ್ಖಂಡ್‌ ಹಿತಾಸಕ್ತಿಗಾಗಿ ಬಿಜೆಪಿಗೆ ಸೇರ್ಪಡೆ: ಮಾಜಿ ಸಿಎಂ ಚಂಪೈ ಸೊರೇನ್

ರಾಂಚಿ: ಜಾರ್ಖಂಡ್‌ನ ಹಿತಾಸಕ್ತಿಗಾಗಿ ನಾನು ಭಾರತೀಯ ಜನತಾ ಪಕ್ಷವನ್ನು ಸೇರುವ ನಿರ್ಧಾರ ತೆಗೆದುಕೊಂಡಿದ್ದೇನೆ. ಜೆಎಂಎಂ ಪಕ್ಷಕ್ಕೆ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಬುಧವಾರ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದ ಚಂಪೈ ಸೂರೇನ್ ಅವರು, ತಮ್ಮ ಪುತ್ರನೊಂದಿಗೆ ಬುಧವಾರ ರಾಂಚಿಗೆ ಆಗಮಿಸಿದರು. ಈ ವೇಳೆ​ ಅವರ ಅನೇಕ ಬೆಂಬಲಿಗರು ಅವರನ್ನು ಸ್ವಾಗತಿಸಿದರು.

ಬಿಜೆಪಿ ಸೇರುವ ನಿರ್ಧಾರದ ಕುರಿತು ಮಂಗಳವಾರ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಚಂಪೂ ಸೂರೇನ್, ಬಾಂಗ್ಲಾದೇಶದಿಂದ ಅತಿರೇಕದ ಒಳನುಸುಳುವಿಕೆಯಿಂದಾಗಿ ಜಾರ್ಖಂಡ್ ನ ಸಂತಾಲ್ ಪರಗಣ ಪ್ರದೇಶದಲ್ಲಿ ಅಪಾಯದಲ್ಲಿರುವ ಬುಡಕಟ್ಟು ಜನಾಂಗದ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸಲು ತಾನು ಬಿಜೆಪಿಗೆ ಸೇರುತ್ತಿದ್ದೇನೆ ಎಂದಿದ್ದರು.

ಬುಡಕಟ್ಟು ಜನಾಂಗದವರ ವಿಷಯದಲ್ಲಿ ಬಿಜೆಪಿ ಮಾತ್ರ ಗಂಭೀರವಾಗಿದೆ. ಇತರರು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

"ಇಂದು ಬಾಬಾ ತಿಲ್ಕಾ ಮಾಂಝಿ ಮತ್ತು ಸಿಡೋ-ಕನ್ಹು ಅವರ ಪುಣ್ಯಭೂಮಿಸಂತಾಲ್ ಪರಗಣದಲ್ಲಿ ಬಾಂಗ್ಲಾದೇಶದ ಒಳನುಸುಳುವಿಕೆ ದೊಡ್ಡ ಸಮಸ್ಯೆಯಾಗಿದೆ. ಬ್ರಿಟಿಷರ ಗುಲಾಮಗಿರಿಯನ್ನು ಎಂದಿಗೂ ಒಪ್ಪಿಕೊಳ್ಳದ ಆ ವೀರರ ವಂಶಸ್ಥರ ಭೂಮಿಯನ್ನು ಈ ನುಸುಳುಕೋರರು ಆಕ್ರಮಿಸಿಕೊಂಡಿರುವುದಕ್ಕಿಂತ ಹೆಚ್ಚಿನ ದುರದೃಷ್ಟಕರ ಏನಿದೆ. ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಅಪಾಯದಲ್ಲಿದ್ದಾರೆ ಎಂದು ಚಂಪೈ ಸೊರೆನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಗಸ್ಟ್​ 30 ರಂದು ರಾಂಚಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಚಂಪೈ ಸೂರೇನ್ ಅವರು ಅಧಿಕೃಗವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಅಸ್ಸಾಂ ಸಿಎಂ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಬಿಜೆಪಿ ಉಸ್ತುವಾರಿ ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.

ಕಳೆದ ಫೆಬ್ರವರಿ 02 ರಂದು ರಾಂಚಿಯಲ್ಲಿ ಜಾರ್ಖಂಡ್ ಸಿಎಂ ಹೇಮಂತ್ ಸೂರೇನ್ ಅವರು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾದಾಗ ಚಂಪೈ ಸೂರೇನ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ ಹೇಮಂತ್​ ಸೂರೇನ್ ಅವರಿಗೆ ಜಾಮೀನು ಲಭಿಸಿದ ಬಳಿಕ ಚಂಪೈ ಬಳಿಕ ರಾಜೀನಾಮೆ ಪಡೆದು ಅವರು ಪುನಃ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.