ಕೊಪ್ಪಳ: ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನೆ ಅಧಿಕಾರಿ ಡಾ.ಶಶಿಧರ ಹೇಳಿದರು.
ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಕ್ರಿಯ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಗ ನಿಯಂತ್ರಣಕ್ಕೆ ಸರ್ವರ ಸಹಕಾರ ಅಗತ್ಯ. ಕ್ಷಯ ರೋಗಿ ಕೆಮ್ಮುವುದು, ಸೀನುವುದರಿಂದ ಇನ್ನೊಬ್ಬರಿಗೆ ಹರಡುತ್ತದೆ. ಒಬ್ಬ ಚಿಕಿತ್ಸೆ ಪಡೆಯದ ರೋಗಿ ಒಂದು ವರ್ಷದಲ್ಲಿ 10 ರಿಂದ 14 ಜನರಿಗೆ ರೋಗ ಹರಡುತ್ತಾನೆ. ಕ್ಷಯ ಮನುಷ್ಯನ ಕೂದಲು ಮತ್ತು ಉಗುರು ಹೊರತುಪಡಿಸಿ ಉಳಿದ ಎಲ್ಲಾ ಭಾಗಗಳಿಗೆ ಬರುತ್ತದೆ.
ಜ್ವರ, ಎರಡು ವಾರ ಸತತ ಕೆಮ್ಮು, ಎದೆ ನೋವು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು, ಕತ್ತು ಮತ್ತು ಕಂಕುಳದಲ್ಲಿ ಗಡ್ಡೆ ರೋಗದ ಲಕ್ಷಣ. ಸೂಕ್ಷ್ಮದರ್ಶಕ ಯಂತ್ರಗಳು, ಟ್ರೂನಾಟ್, ಸಿಬಿನಾಟ್ ಮತ್ತು ಕ್ಷ-ಕಿರಣ ಪರೀಕ್ಷೆ ಮೂಲಕ ಕ್ಷಯ ರೋಗ ಪತ್ತೆ ಮಾಡಲಾಗುವುದು. ಅಪೌಷ್ಟಿಕತೆ ಹೊಂದಿದವರು, ಮಧುಮೇಹಿ, ಎಚ್‌ಐವಿ ಸೋಂಕಿತರು, ತಂಬಾಕು ಮತ್ತು ಮದ್ಯಪಾನ ಮಾಡುವವರಿಗೆ ಬಹು ಬೇಗ ಹರಡುವ ಸಾಧ್ಯತೆ ಇದೆ. ರೋಗದ ಲಕ್ಷಣ ಕಂಡರೆ ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ವಿ.ಡಿ.ಚೌವ್ಹಾಣ ಮಾತನಾಡಿ, ಆರೋಗ್ಯ ಇಲಾಖೆಯಿಂದ ವಿಶೇಷವಾಗಿ, ಕಾರಾಗೃಹದ ಬಂದಿಗಳಿಗೆ ತಿಂಗಳಿಗೊಮ್ಮೆ ಆರೋಗ್ಯ ಪರೀಕ್ಷೆ ಹಮ್ಮಿಕೊಳ್ಳಲಾಗುತ್ತಿದೆ. 80 ಕೈದಿಗಳು ಚರ್ಮರೋಗದಿಂದ ಗುಣವಾಗಿದ್ದಾರೆ. ಟಿಬಿ ಕಾಯಿಲೆಗೆ ಚಿಕಿತ್ಸೆ ಇದ್ದು ರೋಗ ಮುಚ್ಚಿಡದೆ ಚಿಕಿತ್ಸೆ ಪಡೆಯಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ಎನ್.ಟಿ.ಇ.ಪಿ ಕಾರ್ಯಕ್ರಮ ಸಂಯೋಜಕ ಶರಣಪ್ಪ ಭಜಂತ್ರಿ, ಡ್ಯಾಪ್ಕೊ ಜಿಲ್ಲಾ ಮೇಲ್ವಿಚಾರಕ ಮಾಲತೇಶ ಸಜ್ಜನ್ ಇತರರಿದ್ದರು.