ನ್ಯೂಸ್

ಸತ್ಸಂಗದಲ್ಲಿ ಭೀಕರ ಕಾಲ್ತುಳಿತ ಪ್ರಕರಣ; ಸಾವಿನ ಸಂಖ್ಯೆ 120ಕ್ಕೆ ಏರಿಕೆ, ಸಂತಾಪ ಸೂಚಿಸಿ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಲಖನೌ: ಉತ್ತರಪ್ರದೇಶದ ಹತ್ರಾಸ್​ನ ಸಿಕಂದರಾವು ಪ್ರದೇಶದ ಫುಲ್ರೈ ಗ್ರಾಮದಲ್ಲಿ ನಡೆಯುತ್ತಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಉಂಟಾದ ಭೀಕರ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 120ಕ್ಕೆ ಏರಿಕೆಯಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಿಕಂದರಾವು ಪ್ರದೇಶದ ಫುಲ್ರೈ ಗ್ರಾಮದಲ್ಲಿ ಭೋಲೆ ಬಾಬಾ ತಮ್ಮ ಅನುಯಾಯಿಗಳನ್ನು ಉದ್ಧೇಶಿಸಿ ಮಾತನಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಹೆಚ್ಚಿನ ಜನರು ಸೇರಿದ್ದೆ ಅವಘಡಕ್ಕೆ ಮುಖ್ಯ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಧಾರ್ಮಿಕ ಕಾರ್ಯಕ್ರಮ ಮುಗಿದಾಗ ಎಲ್ಲರೂ ಹೊರಗೆ ಹೋಗುವ ಅವಸರದಲ್ಲಿ ಕಾಲ್ತುಳಿತ  ಸಂಭವಿಸಿದೆ. ಸ್ಥಳದಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳು ಜಮಾಯಿಸಿದ್ದರು. ಈ ವೇಲೆ ನೂಕುನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತವಾಗಿದೆ. ಘಟನೆಗೆ ನಿಖರ ಕಾರಣ ಏನು ಎಂಬುದನ್ನು ತನಿಖೆ ನಡೆಸಲಾಗುತ್ತಿದ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಚಾರ ತಿಳಿದು ಸಂತಾಪ ಸೂಚಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಹತ್ರಾಸ್​ ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ  ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಭಕ್ತರು ಸಾವಿಗೀಡಾದ ಸುದ್ದಿ ಹೃದಯ ವಿದ್ರಾವಕವಾಗಿದೆ, ಕುಟುಂಬವನ್ನು ಕಳೆದುಕೊಂಡವರಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರ ಕುಟುಂಬ ಸದಸ್ಯರು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಹತ್ರಾಸ್​ನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮೃತರಿಗೆ ತಲಾ 2 ಲಕ್ಷ ರೂ., ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿದ ವಿಚಾರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರೊಂದಿಗೆ ಮಾತನಾಡಲಾಯಿತು. ಸರ್ಕಾರವು ಸಂತ್ರಸ್ತರಿಗೆ ನೆರವು ನೀಡಲು ಸಿದ್ದವಿದ್ದು, ಮೃತಪಟ್ಟವರ ಕುಟುಂಬಕ್ಕೆ ನೋವನ್ನು ತುಂಬುವ ಶಕ್ತಿ ಆ ದೇವರು ನೀಡಲಿ ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.