ಹರಿಯಾಣ: ಹರಿಯಾಣದ ನೂಹ್ ಪ್ರದೇಶದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ರ್‍ಯಾಲಿ ವೇಳೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಹೋಮ್ ಗಾರ್ಡ್, ಇಮಾಮ್ ಸೇರಿದಂತೆ ಮೂವರು ನಾಗರೀಕರು ಮೃತಪಟ್ಟಿದ್ದಾರೆ. ಸದ್ಯ ಪರಿಸ್ಥಿತಿಯನ್ನು ಹತ್ತೋಟಿಗೆ ತರಲಾಗಿದ್ದು, ಗಲಭೆಗೆ ಕಾರಣರಾದವರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಹರಿಯಾಣದ ನೂಹ್ ಪ್ರದೇಶದಲ್ಲಿ ಘರ್ಷಣೆ ಏರ್ಪಟ್ಟ ಬೆನ್ನಲ್ಲೇ ಉದ್ರಿಕ್ತರ ಗುಂಪೊಂದು ಗುರುಗ್ರಾಮದ ಸೆಕ್ಟರ್ 57ರಲ್ಲಿರುವ ಅಂಜುಮಾನ್ ಜಮಾ ಮಸೀದಿ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ ಇಮಾಮ್ ಒಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಮಸೀದಿ ಮೇಲೆ ದಾಳಿ ಮಾಡಿದವರ ವಿರುದ್ಧ FIR ದಾಖಲಿಸಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಮತ್ತಷ್ಟು ಆರೋಪಿಗಳು ತಲೆಮಾರಿಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ತಿಳಿಸಿದ್ದಾರೆ.
ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ನೂಹ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದ್ದು, ಫರಿದಾಬಾದ್ ಜಿಲ್ಲೆಯಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ.