ಗಾಯಾಳುವನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿರುವುದು. 
ನ್ಯೂಸ್

ಕಾಬುಲ್ ಏರ್​ಪೋರ್ಟ್​ನಲ್ಲಿ ಆತ್ಮಾಹುತಿ ದಾಳಿಗೆ 13 ಬಲಿ: ತಾಲಿಬಾನ್ ಬಳಿಕ ಐಸಿಸ್ ಅಟ್ಟಹಾಸ

ಕಾಬುಲ್: ಅಫ್ಘಾನಿಸ್ತಾನವನ್ನು ತೊರೆಯಲು ಅಮೆರಿಕ ಯೋಧರಿಗೆ ತಾಲಿಬಾನ್ ಆಗಸ್ಟ್ 31ರ ಅಂತಿಮ ಗಡುವು ನೀಡಿರುವ ಬೆನ್ನಲ್ಲೇ ರಾಜಧಾನಿ ಕಾಬುಲ್​ನ ಹಮೀದ್ ಕರ್ಜೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಶಂಕಿತ ಐಸಿಸ್ ಉಗ್ರರು ಗುರುವಾರ ರಾತ್ರಿ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಮಕ್ಕಳು ಸೇರಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಬೆನ್ನಲ್ಲೇ ಕಾಬುಲ್ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ವಿದೇಶಿ ಯೋಧರಿಗೆ ಆದಷ್ಟು ಶೀಘ್ರ ಕಾರ್ಯಾಚರಣೆ ಮುಗಿಸಿ ದೇಶ ಸೇರಿಕೊಳ್ಳುವಂತೆ ಆ ರಾಷ್ಟ್ರಗಳ ನಾಯಕರು ಸೂಚನೆ ನೀಡಿದ್ದಾರೆ. ಇದರೊಂದಿಗೆ, ಅಫ್ಘನ್ ಪರಿಸ್ಥಿತಿ ಇನ್ನಷ್ಟು ವಿಷಮಿಸಿದೆ.

ಗುಂಡಿನ ದಾಳಿ: ಸ್ಪೋಟದಲ್ಲಿ ಅಮೆರಿಕದ ಮೂವರು ಯೋಧರು ಸೇರಿ ಹಲವರಿಗೆ ಗಾಯವಾಗಿದೆ. ವಿಮಾನ ನಿಲ್ದಾಣದ ಅಬ್ಬೆ ಗೇಟ್ ಮತ್ತು ಬ್ಯಾರೆನ್ಸ್ ಹೋಟೆಲ್​ನಲ್ಲಿ ಈ ಸ್ಪೋಟಗಳು ಸಂಭವಿಸಿವೆ. ಇದರ ಜತೆಗೆ ಭೀತರಾಗಿದ್ದ ಜನಸಮೂಹದ ಮೇಲೆ ಗುಂಡಿನ ದಾಳಿಯೂ ನಡೆದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಂಸತ್​ಗೆ ಮಾಹಿತಿ ನೀಡಿದ್ದಾರೆ. ಈ ಎರಡೂ ಸ್ಪೋಟಗಳು ಆತ್ಮಾಹುತಿ ದಾಳಿ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ.

ಮೊದಲೇ ಸುಳಿವು ನೀಡಿದ್ದ ಅಮೆರಿಕ

ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತ ಇರುವ ಜನರು ಶೀಘ್ರವಾಗಿ ಜಾಗ ಖಾಲಿ ಮಾಡಬೇಕು ಎಂದು ಅಮೆರಿಕ ಸೇನೆ ಸೂಚನೆ ನೀಡಿದ್ದ ಕೆಲವೇ ತಾಸಿನಲ್ಲೇ ಈ ದಾಳಿ ನಡೆದಿದೆ. ಉಗ್ರರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಕಾಬುಲ್ ವಿಮಾನ ನಿಲ್ದಾಣಕ್ಕೆ ಬಾರದಂತೆ ಅಮೆರಿಕ ಮತ್ತು ಅದರ ಮಿತ್ರಪಡೆಗಳು ಜನರಿಗೆ ಎಚ್ಚರಿಕೆ ನೀಡಿದ್ದವು. ಈಗಾಗಲೇ ವಿಮಾನ ನಿಲ್ದಾಣದ ಸುತ್ತುಮತ್ತ ಬೀಡುಬಿಟ್ಟಿರುವವರು ಕೂಡಲೇ ವಾಪಸ್ ಹೋಗಬೇಕೆಂದು ಮನವಿ ಮಾಡಿದ್ದವು. ವಿಮಾನ ನಿಲ್ದಾಣದ ಹತ್ತಿರ ತೆರಳದಂತೆ ಆಸ್ಟ್ರೇಲಿಯಾ ಕೂಡ ಹೇಳಿತ್ತು. ಕಾಬುಲ್ ವಿಮಾನ ನಿಲ್ದಾಣಕ್ಕೆ ಸಂರ್ಪಸುವ ಮಾರ್ಗಗಳನ್ನು ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ತಿಳಿಸಿತ್ತು. ಅಮೆರಿಕ ಮತ್ತು ನ್ಯಾಟೊ ಪಡೆಗಳು ಆ. 31ರೊಳಗೆ ಅಫ್ಘನ್​ನಿಂದ ಹೊರಹೋಗುವ ಉದ್ದೇಶದಿಂದ ಪ್ರತಿನಿತ್ಯ ಜನರು ಸಾವಿರಾರು ಸಂಖ್ಯೆಯಲ್ಲಿ ಕಾಬುಲ್ ಏರ್​ಪೋರ್ಟ್​ಗೆ ಬರುತ್ತಿದ್ದಾರೆ. ಅಫ್ಘನ್​ನಲ್ಲಿರುವ ವಿದೇಶಿಯರನ್ನು ಆಯಾ ದೇಶಗಳು ವಾಪಸ್ ಕರೆಯಿಸಿಕೊಳ್ಳುತ್ತಿವೆ. ಜತೆಗೆ ಅಫ್ಘನ್ ನಾಗರಿಕರೂ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಕಾಬುಲ್ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ ಏರ್ಪಟ್ಟಿದೆ. ಕಳೆದ 24 ತಾಸಿನಲ್ಲಿ 19 ಸಾವಿರ ಜನರು ಕಾಬುಲ್​ನಿಂದ ಸ್ಥಳಾಂತರವಾಗಿದ್ದಾರೆ. ಇದರಲ್ಲಿ 11,200 ಮಂದಿ ಅಮೆರಿಕದ ವಿಮಾನದಲ್ಲಿ, 7,800 ಮಂದಿ ಮಿತ್ರರಾಷ್ಟ್ರಗಳ ವಿಮಾನದಲ್ಲಿ ಪಯಣಿಸಿದ್ದಾರೆ ಎಂದು ಪೆಂಟಗನ್ ತಿಳಿಸಿದೆ.

ಜನರ ನಡುವೆ ನುಸುಳಿ ಬಂದ: ಬಾಂಬ್ ಸ್ಪೋಟಿಸಿದ ಸ್ಥಳದಿಂದ ಜನರು ಭಯಭೀತರಾಗಿ ಓಡುತ್ತಿರುವುದು, ಗಾಯ ಗೊಂಡವರನ್ನು ಒಯ್ಯುತ್ತಿರುವ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಆತ್ಮಾಹುತಿ ದಾಳಿಕೋರನೊಬ್ಬ ಒಳಚರಂಡಿ ಕಾಲುವೆಯಲ್ಲಿ ಜಮಾಯಿಸಿದ್ದ ಜನರ ಮಧ್ಯ ಸ್ಪೋಟಿಸಿಕೊಂಡಿದ್ದಾನೆ. ಹೀಗಾಗಿ ಸಾವು-ನೋವು ಅಧಿಕವಾಗಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯನ್ನು ಸ್ಕೈ ನ್ಯೂಸ್ ವರದಿ ಮಾಡಿದೆ.

ಎಲ್ಲೆಲ್ಲಿ ಸ್ಪೋಟ?: ವಿಮಾನ ನಿಲ್ದಾಣದ ಅಬ್ಬೆ ಗೇಟ್, ಫ್ಲಾರೆನ್ಸ್ ಹೋಟೆಲ್ ಆವರಣ