ನ್ಯೂಸ್

ಮತ್ತೆ ಶತಕದತ್ತ ಸಾವಿನ ಸಂಖ್ಯೆ; ಐಸಿಯುನಲ್ಲಿದ್ದಾರೆ 602 ಜನ; 5,172 ಜನರಿಗಿಂದು ಸೋಂಕು

ಬೆಂಗಳೂರು: ನಿತ್ಯ 5 ಸಾವಿರಕ್ಕೂ ಅಧಿಕ ಹೊಸ ಕರೊನಾ ಕೇಸ್​ಗಳು ಪತ್ತೆಯಾಗುವುದು ರಾಜ್ಯದಲ್ಲಿ ಇಂದೂ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ (ಶುಕ್ರವಾರ ಸಂಜೆ 5ರಿಂದ ಶನಿವಾರ ಸಂಜೆ 5 ಗಂಟೆವರೆಗೆ) 5,172 ಜನರು ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು ಕೋವಿಡ್​ ರೋಗಿಗಳ ಸಂಖ್ಯೆ ಈಗ 1,29,287ಕ್ಕೆ ಏರಿದಂತಾಗಿದೆ.

ರಾಜ್ಯದಲ್ಲಿ ಸಾವಿನ ಸಂಖ್ಯೆ ಶತಕ ಸಮೀಪಿಸಿದೆ. 98 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 2,412 ಆಗಿದೆ. ಇದಲ್ಲದೇ, ಒಟ್ಟಾರೆಯಾಗಿ ಕೋವಿಡ್​ನಿಂದ ಗಂಭೀರವಾಗಿರುವವ ಸಂಖ್ಯೆ 609ಕ್ಕೆ ಏರಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಂಚ ಸಮಾಧಾನದ ಸಂಗತಿ ಎಂದರೆ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ನಿನ್ನೆ 3,130 ಜನರು ಚೇತರಿಸಿಕೊಂಡಿದ್ದರೆ, ಇಂದು 3,860 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 73,219 ಆಗಿದೆ.

ಬೆಂಗಳೂರಿನಲ್ಲಿ ನಿನ್ನೆಗೆ ಹೋಲಿಸಿದಲ್ಲಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ನಿನ್ನೆ 2,220 ಆಗಿದ್ದ ಹೊಸ ಪ್ರಕರಣಗಳು ಇಂದು 1,852ಕ್ಕೆ ಇಳಿಕೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 57,396 ಆಗಿದ್ದರೆ, ಈ ಪೈಕಿ ಸಕ್ರಿಯ ಪ್ರಕರಣಗಳು 37,760.

ರಾಜಧಾನಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿ 1,683ಕ್ಕೆ ಏರಿದೆ. ನಿನ್ನೆ 1,113 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರು. ಇಂದು ಕೋವಿಡ್​ಗೆ 27 ಜನರು ಬಲಿಯಾಗಿ ಒಟ್ಟಾರೆ ಸಾವಿನ ಸಂಖ್ಯೆ 1,056ಕ್ಕೆ ಏರಿಕೆಯಾಗಿದೆ.

ರಾಜ್ಯಾದ್ಯಂತ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರು ಸೇರಿ ಒಟ್ಟಾರೆ 2,05,706 ಜನರು ಕ್ವಾರಂಟೈನ್​ನಲ್ಲಿ ಇದ್ದಾರೆ. ಇಂದು ಒಟ್ಟು 34,760 ಜನರಿಗೆ ಕರೊನಾ ತಪಾಸಣೆ ಮಾಡಲಾಗಿದೆ.

ಜಿಲ್ಲಾವಾರು ಕೋವಿಡ್​ ಅಂಕಿ-ಅಂಶ