Death Certificate : ಬದುಕಿರುವಾಗಲೇ ರೋಗಿಯೊಬ್ಬರಿಗೆ ವೈದ್ಯರು ಮರಣ ಪ್ರಮಾಣಪತ್ರ ನೀಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಜಬ್ಬಲ್ಪುರ ವಿಭಾಗದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ.
ಸೋಮವಾರ (ಜ.27) ನಸುಕಿನ ಜಾವ ಜಬ್ಬಲ್ಪುರದ ಗವರಿಘಾಟ್ ಮೂಲದ 66 ವರ್ಷದ ಇಂದ್ರಜಿತ್ ಶುಕ್ಲಾ ಎಂಬುವರನ್ನು ಗಂಭೀರ ಅನಾರೋಗ್ಯ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಂದು ಸಂಜೆ 7.30ಕ್ಕೆ ವೈದ್ಯರು ರೋಗಿಯ ಸಾವನ್ನು ದೃಢಪಡಿಸಿ, ಮರಣ ಪ್ರಮಾಣಪತ್ರವನ್ನು ವಿತರಣೆ ಮಾಡಿದರು. ಆದರೆ, ರೋಗಿಯು ಜೀವಂತವಾಗಿರುವಾಗ ಹೇಗೆ ಮರಣ ಪ್ರಮಾಣಪತ್ರ ನೀಡಿದಿರಿ ಎಂದು ರೋಗಿಯ ಕುಟುಂಬ, ವೈದ್ಯರನ್ನು ಪ್ರಶ್ನೆ ಮಾಡಿತು. ಅಲ್ಲದೆ, ಅದನ್ನು ಸಾಬೀತುಪಡಿಸಲು ರೋಗಿಯ ವಿಡಿಯೋವನ್ನು ಸಹ ತೋರಿಸಿದರು. ಅದರಲ್ಲಿ, ರೋಗಿಯು ಉಸಿರಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು.
ಇದಕ್ಕೂ ಮುನ್ನ ಮರಣ ಪ್ರಮಾಣಪತ್ರವನ್ನು ನೋಡಿದ ರೋಗಿಯ ಮಗ ಆಯುಷ್ಮಾನ್ ಶುಕ್ಲಾ, ತಂದೆಯ ಬಳಿಗೆ ಓಡಿ ಹೋಗಿ ನೋಡಿದಾಗ ಅವರಿನ್ನೂ ಜೀವಂತವಾಗಿದ್ದರು. ಈ ವಿಷಯ ಬೆಳಕಿಗೆ ಬಂದ ನಂತರ ಕುಟುಂಬ ಸದಸ್ಯರು ಆಸ್ಪತ್ರೆ ಆಡಳಿತ ಮಂಡಳಿಯನ್ನು ಪ್ರಶ್ನೆ ಮಾಡಿತು. ಈ ವೇಳೆ ವೈದ್ಯರು ಉತ್ತರಿಸಲು ಪರದಾಡಿದರು. ಇದರಿಂದ ವೈದ್ಯರ ನಿರ್ಲಕ್ಷ್ಯ ಸ್ಪಷ್ಟವಾಯಿತು. ವೈದ್ಯರು ತಮ್ಮ ತಪ್ಪು ಗೊತ್ತಾಗುತ್ತಿದ್ದಂತೆ ಅದನ್ನು ಮುಚ್ಚಿ ಹಾಕುವ ಯತ್ನವಾಗಿ ರೋಗಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿದರು. ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯರು ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ನಮ್ಮ ತಂದೆಯ ಜೀವಕ್ಕೆ ಪ್ರಸ್ತುತ ಅಪಾಯವಿದೆ ಎಂದು ಆಯುಷ್ಮಾನ್ ಶುಕ್ಲಾ ಹೇಳಿದ್ದಾರೆ. ಸ್ಥಿತಿ ಹದಗೆಡುವ ಮೊದಲು ರೋಗಿಗೆ ಸರಿಯಾದ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಘಟನೆಯ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಯಾವುದೇ ಹೇಳಿಕೆ ನೀಡದ ಕಾರಣ ಕುಟುಂಬ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವೈದ್ಯರು ರೋಗಿಯನ್ನು ಆಸ್ಪತ್ರೆಯಿಂದ ಹೊರಗೆ ಕರೆದೊಯ್ಯಲು ಸೂಚನೆ ನೀಡಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಈ ಘಟನೆಯ ಬಗ್ಗೆ ನ್ಯಾಯಕ್ಕಾಗಿ ಕುಟುಂಬ ಸದಸ್ಯರು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಲು ಸಿದ್ಧರಾಗಿದ್ದಾರೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕುಟುಂಬವು ಒತ್ತಾಯಿಸುತ್ತಿದೆ. (ಏಜೆನ್ಸೀಸ್)