ನ್ಯೂಸ್

ಏಲಿಯನ್ಸ್​ ಬರುವ ಟೈಮ್ ಫಿಕ್ಸ್​ ಆಯ್ತು! ಅವರಿಬ್ಬರು ಹೇಳಿದಂತೆ 2025 ಜಗತ್ತಿನ ವಿನಾಶದ ಆರಂಭವೇ? | Time Traveler

Time Traveler : ತಮಿಳು ನಟ ಸೂರ್ಯ ನಟನೆಯ '24' ಸಿನಿಮಾ ನೋಡಿದವರು ಆ ಟೈಮ್ ಟ್ರಾವೆಲಿಂಗ್ ಸ್ಟೋರಿಯನ್ನ ಎಂದಿಗೂ ಮರೆಯುವುದಿಲ್ಲ. ಕನ್ನಡದಲ್ಲೂ ಬ್ಲಿಂಕ್​ ಹೆಸರಿನ ಸಿನಿಮಾದಲ್ಲಿ ಟೈಮ್​ ಟ್ರಾವೆಲ್ ಕತೆ ಇದೆ. ಬ್ಲಿಂಕ್​ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದರೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಇನ್ನು ಹಾಲಿವುಡ್​ನಲ್ಲಿ ಟೈಮ್​ ಟ್ರಾವೆಲ್​ ಕುರಿತ ಅನೇಕ ಸಿನಿಮಾಗಳು ಬಂದಿವೆ.

ಸೈನ್ಸ್​ ಫಿಕ್ಸನ್​ ಸಿನಿಮಾಗಳಲ್ಲಿ ಟೈಮ್​ ಟ್ರಾವೆಲ್​ ಅನ್ನೋದು ಒಂದು ಪ್ರಮುಖ ವಿಷಯವಾಗಿದೆ. ಇಂದಿಗೂ ಸಹ, ಅನೇಕ ವಿಜ್ಞಾನಿಗಳು ಇದೇ ವಿಚಾರದ ಮೇಲೆ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಒಬ್ಬರು ವರ್ತಮಾನದಲ್ಲಿ ಮಾತ್ರ ಬದುಕಲು ಸಾಧ್ಯವಾದರೂ, ಟೈಮ್​ ಟ್ರಾವೆಲ್​ನಿಂದ ಭವಿಷ್ಯ ಮತ್ತು ಭೂತಕಾಲಕ್ಕೆ ಪ್ರಯಾಣಿಸಲು ಸಾಧ್ಯ ಎಂದು ಹೇಳುತ್ತದೆ. ಅಲ್ಲದೆ, ಅನೇಕ ಜನರು ಟೈಮ್​ ಟ್ರಾವೆಲ್​ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ಅನೇಕ ಭವಿಷ್ಯವಾಣಿಗಳನ್ನು ಸಹ ನುಡಿದಿದ್ದಾರೆ.

ಸ್ವಯಂ ಘೋಷಿತ ಟೈಮ್​​ ಟ್ರಾವೆಲ್ ಪ್ರಯಾಣಿಕ​ ಎಲ್ವಿಸ್ ಥಾಂಪ್ಸನ್ ಹೇಳಿರುವ ಅಂತಹ ಒಂದು ಭವಿಷ್ಯವಾಣಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತನ್ನ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಲ್ವಿಸ್​ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಎಲ್ವಿಸ್ ತನ್ನನ್ನು ತಾನು ಟೈಮ್​ ಟ್ರಾವೆಲ್ಲರ್​ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಭವಿಷ್ಯಕ್ಕೆ ಪ್ರಯಾಣಿಸಿ ಹಿಂತಿರುಗಿರುವುದಾಗಿ ತಿಳಿಸಿದ್ದಾರೆ. ಪ್ರಮುಖ ಸಂಗತಿ ಏನೆಂದರೆ, 2025ರಲ್ಲಿ ಏನೆಲ್ಲ ಘಟನೆಗಳು ನಡೆಯುತ್ತವೆ ಅನ್ನೋದರ ಬಗ್ಗೆಯೂ ಮಾತನಾಡಿದ್ದಾರೆ.

* ಎಲ್ವಿಸ್​ ನೀಡಿರುವ ಮೊದಲ ಮುನ್ಸೂಚನೆ ಪ್ರಕಾರ, ಅಮೆರಿಕದ ಒಕ್ಲಹೋಮದಲ್ಲಿ ವಿನಾಶಕಾರಿ ಸುಂಟರಗಾಳಿ ಬೀಸಲಿದೆ. ಇದು ಏಪ್ರಿಲ್ 6 ರಂದು ಸಂಭವಿಸಲಿದೆ ಮತ್ತು 1046 ಕಿ.ಮೀ ವೇಗದಲ್ಲಿ ಬೀಸುವ ಈ ಸುಂಟರಗಾಳಿಯು ಒಕ್ಲಹೋಮ ನಗರವನ್ನು ಆವರಿಸಿ, ನಾಶಮಾಡಲಿದೆ ಎಂದು ಅಂದಾಜಿಸಲಾಗಿದೆ.

* ಎರಡನೇ ಭವಿಷ್ಯವಾಣಿಯೆಂದರೆ, ಮೇ 27ರಂದು ಅಮೆರಿಕದಲ್ಲಿ ಎರಡನೇ ಅಂತರ್ಯುದ್ಧ ನಡೆಯಲಿದೆ. ಇದರ ಪರಿಣಾಮವಾಗಿ, ಟೆಕ್ಸಾಸ್ ಅಮೆರಿಕದಿಂದ ಬೇರ್ಪಡುತ್ತದೆ. ಪರಮಾಣು ಶಸ್ತ್ರಾಸ್ತ್ರಗಳು ಸೇರಿದಂತೆ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತದೆ ಎಂಬುದು ಭವಿಷ್ಯವಾಣಿಯಾಗಿದೆ. ಇದು ಜಾಗತಿಕ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದೂ ಹೇಳಲಾಗಿದೆ.

* ಮೂರನೇ ಮುನ್ಸೂಚನೆ ಏನೆಂದರೆ, ಚಾಂಪಿಯನ್ ಹೆಸರಿನ ಅನ್ಯಲೋಕದ ಜೀವಿ ಸೆಪ್ಟೆಂಬರ್ 1 ರಂದು ಭೂಮಿಗೆ ಆಗಮಿಸಲಿದೆಯಂತೆ. ಇದು 12,000 ಮಾನವರನ್ನು ಅವರ ಸುರಕ್ಷತೆಗಾಗಿ ಮತ್ತೊಂದು ವಾಸಯೋಗ್ಯ ಗ್ರಹಕ್ಕೆ ಕರೆದೊಯ್ಯುತ್ತದೆಯಂತೆ. ಭೂಮಿಗೆ ಹಾನಿ ಮಾಡುತ್ತಿರುವ ಅಪಾಯಕಾರಿ ಅನ್ಯಗ್ರಹ ಜೀವಿಗಳ ಬಗ್ಗೆಯೂ ಎಲ್ವಿಸ್​ ಎಚ್ಚರಿಸಿದ್ದಾರೆ.

* ನಾಲ್ಕನೇ ಭವಿಷ್ಯವಾಣಿ ಏನೆಂದರೆ, ಸೆಪ್ಟೆಂಬರ್ 19ರಂದು ಅಮೆರಿಕದ ಪೂರ್ವ ಕರಾವಳಿಗೆ ಪ್ರಬಲ ಚಂಡಮಾರುತ ಅಪ್ಪಳಿಸುತ್ತದೆ.

* ಐದನೇ ಮುನ್ಸೂಚನೆ ಪ್ರಕಾರ, ನವೆಂಬರ್ 3ರಂದು ಪೆಸಿಫಿಕ್ ಮಹಾಸಾಗರದಲ್ಲಿ ಒಂದು ದೊಡ್ಡ ಜೀವಿ ಕಾಣಿಸಿಕೊಳ್ಳಲಿದೆ. ನೀಲಿ ತಿಮಿಂಗಿಲಕ್ಕಿಂತ ಆರು ಪಟ್ಟು ದೊಡ್ಡದಾದ ಈ ದೈತ್ಯ ಸಮುದ್ರ ಜೀವಿಯನ್ನು ಸೆರೆನ್ ಕ್ರೌನ್ ಎಂದು ಕರೆಯಲಾಗುವುದು ಎಂದು ಎಲ್ವಿಸ್​ ಭವಿಷ್ಯ ನುಡಿದಿದ್ದಾರೆ.

ಅಂದಹಾಗೆ ಎಲ್ವಿಸ್​ ಅವರ ವಿಡಿಯೋವನ್ನು ಈಗಾಗಲೇ 2.6 ಕೋಟಿ ಜನರು ವೀಕ್ಷಿಸಿದ್ದಾರೆ. ಹಲವು ಕಾಮೆಂಟ್‌ಗಳು ಸಹ ಬಂದಿವೆ. ಕಾಮೆಂಟ್ ಮಾಡುವ ಹೆಚ್ಚಿನ ಜನರು ಎಲ್ವಿಸ್ ಹೇಳುವುದುನ್ನು ನಂಬಿಲ್ಲ. ಅಲ್ಲದೇ ಹಲವರು ಎಲ್ವಿಸ್​ ಅವರನ್ನೇ ಗೇಲಿ ಮಾಡುತ್ತಿದ್ದಾರೆ. ಇದು ಕೆಲಸ ಮಾಡುವುದಿಲ್ಲ ಮತ್ತು ಇದು ನಿಷ್ಪ್ರಯೋಜಕ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

2025 ಜಗತ್ತಿನ ವಿನಾಶದ ಆರಂಭವೇ?

ಈ 2025ರಲ್ಲಿ ವಿನಾಶಕಾರಿ ಘಟನೆಗಳು ಸಂಭವಿಸುತ್ತವೆ ಎಂದು ಎಲ್ವಿಸ್​ ಥಾಂಪ್ಸನ್​ ಭವಿಷ್ಯ ನುಡಿದಿದ್ದಾರೆ. ಅದೇ ರೀತಿ ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ನುಡಿದಿರುವ ಭವಿಷ್ಯಗಳು ಕೂಡ ಇದೀಗ ನೆನಪಾಗುತ್ತಿವೆ. ಅವರ ಪ್ರಕಾರ 2025 ಜಗತ್ತಿನ ವಿನಾಶದ ಆರಂಭದ ವರ್ಷವಂತೆ. 2025ರಲ್ಲಿ ನಡೆಯುವ ಘಟನೆಗಳು ಜಾಗತಿಕ ವಿನಾಶದ ಆರಂಭಕ್ಕೆ ಕಾರಣವಾಗಿ, 5079ಕ್ಕೆ ವಿಶ್ವವೇ ಅಂತ್ಯವಾಗಲಿದೆ. ಅಂದರೆ, 2025ರಿಂದ ಜಗತ್ತಿನ ವಿನಾಶ ಆರಂಭವಾಗಲಿದೆ ಎಂದು ಬಾಂಬಾ ವಂಗಾ ಭಯಾನಕ ಭವಿಷ್ಯ ನುಡಿದಿದ್ದಾರೆ.

5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ

ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ.

ಯಾರೀ ಬಾಬಾ ವಂಗಾ?

ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಅನೇಕ ಭವಿಷ್ಯಗಳು ನಿಜವಾಗಿವೆ

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ. (ಏಜೆನ್ಸೀಸ್​)