Presumed Dead: 18 ತಿಂಗಳ ಹಿಂದೆ ತಮ್ಮ ಕೈಯಿಂದಲೇ ಮಗಳ ದೇಹವನ್ನು ಮಣ್ಣು ಮಾಡಿದ್ದ ಪೋಷಕರಿಗೆ ಇದೀಗ ದಿಢೀರ್ ಆಕೆ ತಮ್ಮ ಮುಂದೆ ಪ್ರತ್ಯಕ್ಷವಾಗಿದ್ದನ್ನು ಕಂಡು ಅಕ್ಷರಶಃ ಕುಸಿದು ಹೋಗಿದ್ದಾರೆ. ಮೃತ ಮಗಳನ್ನು ಪತ್ತೆಹಚ್ಚಿದ ನಾವು, ಆಕೆಯ ಅಂತ್ಯಕ್ರಿಯೆಯನ್ನು ಮಾಡಿ ಮನೆಗೆ ಬಂದಿದ್ದೆವು. ಈಗ ಬಂದಿರುವುದು ಯಾರು? ಎಂದು ಗಾಬರಿಗೊಂಡ ಪೋಷಕರು, ಆಕೆ ತಮ್ಮ ಮಗಳು ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ಹಾಗಿದ್ದರೆ, ಇಲ್ಲಿ ನಾವು ಯಾರ ದೇಹವನ್ನು ನಮ್ಮ ಮಗಳದ್ದು ಎಂದು ಗುರುತಿಸಿದೆವು ಎಂದು ಹೆತ್ತವರು ತಲೆಕಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಿರಾಜ್ ಪೋಸ್ಟ್ ಡಿಲೀಟ್! ಡೇಟಿಂಗ್ ವದಂತಿಗಳ ಬಗ್ಗೆ ಕೊನೆಗೂ ತುಟಿ ಬಿಚ್ಚಿದ ಬ್ಯೂಟಿ ಮಹಿರಾ ಶರ್ಮ | Mahira Sharma
ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಲಲಿತಾ ಬಾಯಿ ಎಂದು ಗುರುತಿಸಲಾದ ಯುವತಿ, ತನ್ನ ತಂದೆಯೊಂದಿಗೆ ಪೊಲೀಸ್ ಠಾಣೆಯಲ್ಲಿ ಹಾಜರಾಗಿ, ನಾನಿನ್ನು ಜೀವಂತವಾಗಿದ್ದೇನೆ ಎಂದು ಆಧಾರ್ ಕಾರ್ಡ್ ಸೇರಿದಂತೆ ಇತರೆ ಮೂಲ ದಾಖಲಾತಿಗಳನ್ನು ತೋರಿಸಿ ದೃಢಪಡಿಸಿದ್ದಾಳೆ. ಇದನ್ನು ನೋಡಿ ಪೊಲೀಸರು ಕಂಗಾಲಾಗಿದ್ದಾರೆ. ಕಾರಣ, ಆಕೆಯ ಸಾವು ಕೊಲೆ ಎಂಬ ಆರೋಪದಡಿ ನಾಲ್ವರನ್ನು ಶಿಕ್ಷೆಗೆ ಒಳಪಡಿಸಿದ್ದಾರೆ. ಸುಖಾಸುಮ್ಮನೆ ನಾಲ್ವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರ ಬಗ್ಗೆ ಪೊಲೀಸರು ತಲೆಕಡಿಸಿಕೊಂಡಿದ್ದಾರೆ.
ಲಲಿತಾ ತಂದೆ ರಮೇಶ್ ನನುರಾಮ್ ಬಂಛಾದ ಪ್ರಕಾರ, ಕೈಯಲ್ಲಿ ಹಚ್ಚೆ ಮತ್ತು ಕಾಲಿಗೆ ಕಟ್ಟಲಾದ ಕಪ್ಪು ದಾರ ಸೇರಿದಂತೆ ದೈಹಿಕ ಗುರುತುಗಳ ಆಧಾರದ ಮೇಲೆ ಕುಟುಂಬವು ವಿರೂಪಗೊಂಡ ದೇಹವನ್ನು ಮಗಳು ಲಲಿತಾ ಎಂದು ಗುರುತಿಸಿದ ಬಳಿಕವೇ ನಮ್ಮ ಕುಟುಂಬವು ಅಂತ್ಯಕ್ರಿಯೆಯನ್ನು ಮುಗಿಸಿತು. ಆದರೆ, ಅಂದು ಲಲಿತಾ ಸಾವಿಗೀಡಾಗಿರಲಿಲ್ಲ ಎಂದರೆ ಮೃತ ವ್ಯಕ್ತಿ ಯಾರು ಎಂದು ಪ್ರಶ್ನಿಸಿದ್ದಾರೆ.
ಅಂದು ಲಲಿತಾ ಸಾವು ಕೊಲೆ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ಆರೋಪದಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಇಮ್ರಾನ್, ಶಾರುಖ್, ಸೋನು ಮತ್ತು ಎಜಾಜ್ ಎಂಬ ನಾಲ್ವರನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದರು. ಆದಾಗ್ಯೂ, ಸುಮಾರು 18 ತಿಂಗಳ ನಂತರ ಲಲಿತಾ ತನ್ನ ಗ್ರಾಮಕ್ಕೆ ಮರಳಿರುವುದು ಗೊಂದಲಮಯ. ಆಕೆ ಜೀವಂತವಾಗಿರುವುದನ್ನು ನೋಡಿ ಆಘಾತಕ್ಕೊಳಗಾದ ಆಕೆಯ ತಂದೆ ತಕ್ಷಣ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತನ್ನ ಕಣ್ಮರೆ ಬಗ್ಗೆ ವಿವರಿಸಿದ ಲಲಿತಾ, ನಾನು ಶಾರುಖ್ ಜೊತೆ ಭಾನುಪಾರಕ್ಕೆ ಹೋಗಿದ್ದೆ. ಅಲ್ಲಿ ಎರಡು ದಿನಗಳ ಕಾಲ ಉಳಿದುಕೊಂಡಿದ್ದೆ. ಈ ವೇಳೆ ಶಾರುಖ್ ನನ್ನನ್ನು ಮತ್ತೊಬ್ಬ ವ್ಯಕ್ತಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿದ. ಕೋಟಾದಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಇದ್ದೆ. ಅವರ ಕೈಯಿಂದ ಹೇಗೋ ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕಿತು. ತಕ್ಷಣ ಅವರಿವರ ಸಹಾಯದಿಂದ ನನ್ನೂರಿಗೆ ಬಂದು ತಲುಪಿದೆ ಎಂದು ಹೇಳಿದ್ದಾಳೆ. ಯುವತಿ ತನ್ನ ಗುರುತನ್ನು ದೃಡಪಡಿಸಲು ತನ್ನ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿದ್ದಾಳೆ,(ಏಜೆನ್ಸೀಸ್).