ನ್ಯೂಸ್

ಹುಟ್ಟುಹಬ್ಬ ಆಚರಣೆ ವೇಳೆ ಕೇಕ್​ ತಿಂದು 8 ಮಂದಿ ಅಸ್ವಸ್ಥ: ಕೇಕ್​ ಪರಿಶೀಲಿಸಿದಾಗ ಕಾದಿತ್ತು ಆಘಾತ!

ಬೀದರ್: ಹುಟ್ಟುಹಬ್ಬ ಆಚರಣೆ ವೇಳೆ ಕೇಕ್​ ಎಲ್ಲರ ಫೇವರಿಟ್ ಎಂಬುದರಲ್ಲಿ​ ಸಂಶಯವಿಲ್ಲ. ಕೇಕ್​ ಇಷ್ಟಪಡುವವರ ಸಂಖ್ಯೆಯೇನು ಕಮ್ಮಿ ಇಲ್ಲ. ಹೀಗಾಗಿ ಕೇಕ್​ ಸಿಕ್ಕಿತ್ತು ಎನ್ನುವ ಭರದಲ್ಲಿ ಹಿಂದೆ ಮುಂದೆ ನೋಡದೆ ಹಾಗೇ ಬಾಯಿಗೆ ಇಟ್ಟುಕೊಳ್ಳುವುದು ಸೂಕ್ತವಲ್ಲ ಎಂಬುದಕ್ಕೆ ಈ ಸ್ಟೋರಿ ಎಚ್ಚರಿಕೆಯ ಗಂಟೆಯಾಗಿದೆ.

ಮಹಾರಾಷ್ಟ್ರದ ಲಾತೂರ್​ ಜಿಲ್ಲೆಯ ಔಸಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜೀಕಾರಾ ಶೇಖ್ ಎಂಬ 1 ವರ್ಷದ ಮಗುವಿನ‌ ಜನ್ಮದಿನ ಆಚರಣೆಗೆ 4 ಸಾವಿರಕ್ಕೂ ಅಧಿಕ ಖರ್ಚು ಮಾಡಿ ಬೇಕರಿಯಿಂದ ಕೇಕ್ ತರಿಸಿದ್ದರು. ಬರೀ ಕೇಕ್​ ಮಾತ್ರ ಬಂದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಕೇಕ್​ ಒಳಗೆ ಸತ್ತ ಹಾವಿನ ಮರಿಯೂ ಬಂದಿದ್ದರಿಂದ, ಅದನ್ನು ತಿಂದ 8ಕ್ಕೂ ಅಧಿಕ ಮಂದಿ ಇದೀಗ ಆಸ್ಪತ್ರೆಯ ಪಾಲಾಗಿದ್ದಾರೆ.

ಮಾರ್ಚ್​ 8 ರಂದು ಜನ್ಮದಿನ‌ ಆಚರಣೆ ಹಿನ್ನೆಲೆಯಲ್ಲಿ ಮಾರ್ಚ್​ 04ರಂದು ಕೇಕ್ ಆರ್ಡರ್ ಮಾಡಿದ್ದರು. ಮಾರ್ಚ್​ 8ರ ರಾತ್ರಿ ಹುಟ್ಟುಹಬ್ಬ ಆಚರಿಸಿದ್ದಾರೆ. ಬಳಿಕ ಕೇಕ್​ ಕತ್ತರಿಸಿ ಆಚರಣೆಯಲ್ಲಿ ಭಾಗಿಯಾಗಿದ್ದವರಿಗೆ ನೀಡಲಾಗಿದೆ. ಅದನ್ನು ತಿಂದ 8ಕ್ಕೂ ಹೆಚ್ಚು ಮಂದಿಗೆ ಮರುದಿನ ಬೆಳಗ್ಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣವೇನೆಂದು ಕೇಕ್​ ಪರಿಶೀಲಿಸಿದಾಗ ಸತ್ತ ಹಾವಿನ ಮರಿ ಇರುವುದನ್ನು ಕಂಡು ಎಲ್ಲರು ಆತಂಕಕ್ಕೀಡಾಗಿದ್ದಾರೆ. (ದಿಗ್ವಿಜಯ ನ್ಯೂಸ್​​)